ಸಚಿವ ಸ್ಥಾನಕ್ಕಾಗಿ ಬಿಎಸ್‌ವೈ ಮುಂದೆ ಕೈ ಚಾಚಿ ಬೇಡುವಷ್ಟು ಅಯೋಗ್ಯ ನಾನಲ್ಲ: ಶಾಸಕ ಯತ್ನಾಳ್

Update: 2020-05-29 13:35 GMT

ಬೆಂಗಳೂರು, ಮೇ 29: ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವವರೆಗೆ ಸಚಿವ ಸ್ಥಾನಕ್ಕಾಗಿ ಅವರ ಮುಂದೆ ಕೈ ಚಾಚಿ ಬೇಡುವಷ್ಟು ಅಯೋಗ್ಯ ನಾನಲ್ಲ. ಯಡಿಯೂರಪ್ಪ, ಈಶ್ವರಪ್ಪ, ಶಿವಪ್ಪ, ಅನಂತಕುಮಾರ್ ಹೊರತುಪಡಿಸಿದರೆ ಪಕ್ಷದಲ್ಲಿ ನಾನೇ ಹಿರಿಯ. ಅಧಿಕಾರಕ್ಕಾಗಿ ಒಬ್ಬರ ಬಾಗಿಲಿಗೆ ಹೋಗುವಷ್ಟು ಸಣ್ಣವನಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಉಮೇಶ್ ಕತ್ತಿ ಅವರ ನಿವಾಸದಲ್ಲಿ ಊಟಕ್ಕಾಗಿ ನಾವು ಒಂದೆಡೆ ಸೇರಿದ್ದು ನಿಜ. ಆದರೆ, ಉಮೇಶ ಕತ್ತಿಯನ್ನು ಸಚಿವನನ್ನಾಗಿ ಮಾಡಿ ಎಂದಾಗಲಿ, ಅಥವಾ ಅವರ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಸದಸ್ಯ ಸ್ಥಾನ ನೀಡಿ ಎಂದು ಒತ್ತಡ ಹೇರಲು ನಾವು ಸೇರಿರಲಿಲ್ಲ ಎಂದರು.

ನಮ್ಮ ನಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಸಿದ್ದೇವೆಯೆ ಹೊರತು, ಬೇರೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ. ಮುಖ್ಯಮಂತ್ರಿ ವಿರುದ್ಧ ನಾವು ಯಾವುದೇ ಸಭೆಯನ್ನು ಮಾಡಿಲ್ಲ. ಕಳೆದ 11 ತಿಂಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಯನ್ನು ಕೇಳಿದ್ದೇನೆ. ಇದೇ ವಿಚಾರವಾಗಿ ಹಲವು ಬಾರಿ ಅವರನ್ನು ಭೇಟಿಯಾಗಿದ್ದೇನೆ, ಆದರೂ ಅನುದಾನ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆಯೇ? ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಪೂರ್ಣಗೊಳಿಸುತ್ತಾರೆಯೆ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News