ನೆಹರೂ ಮೈದಾನದ ಬಳಿ ಮಾರುಕಟ್ಟೆ ನಿರ್ಮಾಣ ವಿಚಾರ: ಮಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ನೋಟಿಸ್

Update: 2020-05-29 15:14 GMT

ಬೆಂಗಳೂರು, ಮೇ 29: ಮಂಗಳೂರು ನಗರದ ನೆಹರು ಮೈದಾನದ ಫುಟ್ಬಾಲ್ ಗ್ರೌಂಡ್‍ನಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆ ನಿರ್ಮಾಣವನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಮಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ವಿಜಯ ಸುವರ್ಣ, ಮುಹಮ್ಮದ್ ಹುಸೈನ್, ಅಂಥೋಣಿ ಸೆಬಾಸ್ಟಿಯನ್ ಫರ್ನಾಂಡಿಸ್ ಸೇರಿ 11 ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ.ಸಚಿನ್ ಶಂಕರ್ ಮಗದುಂ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ವಿಚಾರಣೆ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ ಅರ್ಜಿಗೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೇ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಅರ್ಜಿ ಸಂಬಂಧ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಸುನೀಲ್ ಕುಮಾರ್ ಅವರು ವಾದಿಸಿ, ನೆಹರೂ ಮೈದಾನ ಎಂದು ಪ್ರಸಿದ್ಧಿ ಪಡೆದಿರುವ ಮಂಗಳೂರು ನಗರದ ಸಾರ್ವಜನಿಕ ಮೈದಾನ 21 ಎಕರೆ ವಿಸ್ತೀರ್ಣ ಹೊಂದಿದೆ. 100 ವರ್ಷಗಳ ಹಿಂದೆ ಬ್ರಿಟೀಷ್ ಸರಕಾರ ಇದನ್ನು ಸಾರ್ವಜನಿಕ ಮೈದಾನ ಎಂದು ಘೋಷಿಸಿತ್ತು. 1985ರಲ್ಲಿ ಈ ಮೈದಾನವನ್ನು ‘ಕರ್ನಾಟಕ ಉದ್ಯಾನಗಳು ಮತ್ತು ಬಯಲು ಪ್ರದೇಶಗಳು (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ-1985’ರ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದೆ.

ಈ ಮೈದಾನದಲ್ಲಿರುವ ಫುಟ್ಬಾಲ್ ಗ್ರೌಂಡ್‍ನಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ ನಿರ್ಮಿಸಲು ಮುಂದಾಗಿದೆ. ಇದರಿಂದ ಸ್ಥಳೀಯರ ದಿನನಿತ್ಯದ ಆಟೋಟಗಳಿಗೆ, ಸಾರ್ವಜನಿಕರ ವಾಯು ವಿವಾರಕ್ಕೆ ತೊಂದರೆ ಆಗಲಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಅರ್ಜಿದಾರರು ಮೇ 14ರಂದು ಮನವಿ ನೀಡಿದ್ದಾರೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್‍ನಲ್ಲಿ ತರಕಾರಿ ಮತ್ತು ಮಾಂಸ ಮಾರುಕಟ್ಟೆ ನಿರ್ಮಾಣ ಮಾಡದಂತೆ ಮತ್ತು ಫುಟ್ಬಾಲ್ ಗ್ರೌಂಡ್ ಅನ್ನು ಸಂರಕ್ಷಿಸಬೇಕು ಎಂದು ಮೇ 14ರಂದು ನೀಡಲಾಗಿರುವ ಮನವಿಯನ್ನು ಪರಿಗಣಿಸುವಂತೆ, ಫುಟ್ಬಾಲ್ ಗ್ರೌಂಡ್‍ನಲ್ಲಿ ಯಾವುದೇ ರೀತಿಯ ಶಾಶ್ವತ ಅಥವಾ ತಾತ್ಕಾಲಿಕ ನಿರ್ಮಾಣ ಕಾಮಗಾರಿ ಕೈಗೊಳ್ಳಬಾರದು. ಅರ್ಜಿ ಇತ್ಯರ್ಥಗೊಳ್ಳುವವರೆಗೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News