ಮೈಷುಗರ್ ಕಾರ್ಖಾನೆ ಖಾಸಗೀಕರಣ ಬೇಡ: ಡಿಕೆಶಿ ಒತ್ತಾಯ

Update: 2020-05-29 16:20 GMT

ಬೆಂಗಳೂರು, ಮೇ 29: ರಾಷ್ಟ್ರ ಹಾಗೂ ರಾಜ್ಯದ ಆರ್ಥಿಕತೆಗ ಬಹುದೊಡ್ಡ ಕೊಡುಗೆ ನೀಡಿರುವ ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದೆಂದು ಕೆಪಿಸಿಸಿ ರಾಜ್ಯಾದ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಮೈಷುಗರ್ ಕಾರ್ಖಾನೆಯು ಕರ್ನಾಟಕದಲ್ಲಿಯೇ ಮೊಟ್ಟಮೊದಲ ಸರಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ, ಸರಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು, ಸರಕಾರವೇ ನಿರ್ವಹಿಸಬೇಕು. ಹಾಗೂ ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಒದಗಿಸಬೇಕು.

ಮೈಷುಗರ್ ಕಾರ್ಖಾನೆಯಲ್ಲಿ ಇದುವರೆಗೂ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ಆಗಬೇಕು.  ಸಾವಿರಾರು ಕೋಟಿ ರೂ.ಮೌಲ್ಯದ ಕಾರ್ಖಾನೆಯನ್ನು ಖಾಸಗಿ ವ್ಯಕ್ತಿಗಳಿಗೆ ಅಲ್ಪ ಮೊತ್ತಕ್ಕೆ ಮಾರಾಟ ಮಾಡುವಂತಹ ಹುನ್ನಾರದಿಂದ ಹೊರ ಬಂದು, ಕಾರ್ಖಾನೆಯು ಜನರ, ರೈತರ ಪ್ರತಿನಿಧಿಯಾಗಿ ಉಳಿಯುವಂತೆ ಅಗತ್ಯ ಕ್ರಮಗಳ ಕಡೆಗೆ ಕ್ರಮ ವಹಿಸಬೇಕು.

ರಾಜ್ಯದಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳೆಲ್ಲವೂ ಉತ್ತಮವಾಗಿಲ್ಲ. ಈಗಲೂ ರೈತರಿಗೆ ಕೊಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಅಮೂಲ್ಯವಾದ ಸಂಪತ್ತನ್ನು ಹೊಂದಿರುವ ಹಾಗೂ ರಾಜ್ಯದ ಅಸ್ಮಿತೆಗಳಲ್ಲಿ ಒಂದಾಗಿರುವ ಮೈಷುಗರ್ ಕಂಪೆನಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಒಳ್ಳೆಯ ನಿರ್ಧಾರವಲ್ಲವೆಂದು ಮನಗಾಣಬೇಕಿದೆ. ಮೈಷುಗರ್ ಕಾರ್ಖಾನೆಯಲ್ಲಿ ಸುಸ್ಥಿತಿಯಲ್ಲಿರುವ ಒಂದು ಮಿಲ್ಲನ್ನು ತಕ್ಷಣವೇ ಆರಂಭಿಸಿ ಕಬ್ಬನ್ನು ಅರೆಯಬೇಕು. ಹಾಗೂ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News