ಬಿಜೆಪಿ ಶಾಸಕ ರೇವೂರು ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಒತ್ತಾಯ

Update: 2020-05-29 16:21 GMT

ಬೆಂಗಳೂರು, ಮೇ 29: `ಕಲಬುರಗಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ್ ಸಂಗ ಅವರಿಗೆ ವರ್ಗಾವಣೆಯ ಬೆದರಿಕೆಯೊಡ್ಡಿ ಹಣಕ್ಕಾಗಿ ಪೀಡಿಸಿದ ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು ವಿರುದ್ಧ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು ಅವರು ತಾವು ಬೆದರಿಕೆಯೊಡ್ಡಿದ್ದು ಮಾತ್ರವಲ್ಲ, ಹಾದಿಮನಿ ಎಂಬ ಕಾರ್ಪೋರೇಟರ್ ರಿಂದಲೂ ಬೆದರಿಕೆ ಹಾಕಿಸಿದ್ದಾರೆ. ಇದು ಭ್ರಷ್ಟಾಚಾರ ಎಸಗಿದ ಮತ್ತು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪವಾಗಿದೆ. ಆದುದರಿಂದ ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದು, ಕೂಡಲೇ ಅಧಿಕಾರಿ ರಮೇಶ್ ಸಂಗ ನೀಡುವ ದೂರನ್ನು ದಾಖಲಿಸಿ, ಶಾಸಕರ ದತ್ತಾತ್ರೇಯ ಪಾಟೀಲ್ ರೇವೂರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಸಿದ್ದರಾಮಯ್ಯ ಇಂದಿಲ್ಲಿ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News