ರಾಜ್ಯಾದ್ಯಂತ 60 ದಿನಗಳಲ್ಲಿ ಇ ಗ್ರಂಥಾಲಯದಲ್ಲಿ 1.54 ಲಕ್ಷ ಜನರ ನೋಂದಣಿ

Update: 2020-05-29 17:33 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 29: ಲಾಕ್​ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿದ್ದು, ಗ್ರಂಥಾಲಯಗಳು ಕಾರ್ಯಾಚರಿಸಲು ಅನುಮತಿ ನೀಡುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಹಿರಿಯ ನಾಗರಿಕರು ಗ್ರಂಥಾಲಯಗಳನ್ನು ಆರಂಭಿಸುವಂತೆ ಆಗ್ರಹಿಸುತ್ತಿದ್ದು, ಸುರಕ್ಷಿತ ಅಂತರ, ಸರಕಾರದ ನಿರ್ದೇಶನ ಪಾಲಿಸಿಕೊಂಡು ಕಾರ್ಯಾಚರಿಸಲು ಅನುಮತಿ ನೀಡಬೇಕೆಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 200 ಸೇರಿದಂತೆ ರಾಜ್ಯಾದ್ಯಂತ ನೂರಾರು ಸಾರ್ವಜನಿಕ ಗ್ರಂಥಾಲಯಗಳಿದ್ದು, ಲಾಕ್​ಡೌನ್ ಹಿನ್ನೆಲೆ ಮುಚ್ಚಲಾಗಿತ್ತು. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಅನುಕೂಲವಾಗಿದ್ದ ಗ್ರಂಥಾಲಯಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದರಿಂದ ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. 

ಗ್ರಂಥಾಲಯ ಆರಂಭದಿಂದ ಪರೀಕ್ಷಾರ್ಥಿಗಳಿಗೆ ಅನುಕೂಲ: ಎಫ್ಡಿಎ, ಎಸ್ಡಿಎ, ಕೆಸೆಟ್, ಕೆಎಎಸ್, ಪೊಲೀಸ್, ಅಬಕಾರಿ, ರೈಲ್ವೆ ಇನ್ನಿತರ ಹುದ್ದೆಗಳಿಗೆ ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಹಾಕಿದ್ದು, ಲಾಕ್​ಡೌನ್ ಸಡಿಲದಿಂದಾಗಿ ಒಂದೊಂದೇ ಪರೀಕ್ಷೆಗಳನ್ನು ನಡೆಸಲು ಸರಕಾರ ಮುಂದಾಗಿದೆ. ಪರೀಕ್ಷಾರ್ಥಿಗಳು ಲಾಕ್​ಡೌನ್ ಹಿನ್ನೆಲೆ ಮನೆಯಲ್ಲಿಯೇ ಇದ್ದು ತಯಾರಿ ನಡೆಸಬೇಕಾಗಿದೆ. ಇದರಿಂದಾಗಿ ಗ್ರಂಥಾಲಯ ಆರಂಭವಾದರೆ ಅನುಕೂಲವಾಗಲಿದೆ. ಆದ್ದರಿಂದ ಗ್ರಂಥಾಲಯಗಳ ಬಾಗಿಲು ತೆರೆಯಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಬೆಂಗಳೂರಿಗೆ ಬಂದಿದ್ದು, ಲಾಕ್​ಡೌನ್ ಹಿನ್ನೆಲೆ ಮನೆಯಲ್ಲಿಯೇ ಓದುತ್ತಿದ್ದೇನೆ. ಹೊಟೇಲ್, ದೇವಸ್ಥಾನ ಆರಂಭವಾದಂತೆ ಗ್ರಂಥಾಲಯ ಆರಂಭವಾದರೆ ಓದಲು ಅನುಕೂಲವಾಗಲಿದೆ. ಸುರಕ್ಷಿತ ಅಂತರ ಕಾಯ್ದುಕೊಂಡು ಓದಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಮಹೇಶ್ ಒತ್ತಾಯಿಸಿದ್ದಾರೆ.

60 ದಿನಗಳಲ್ಲಿ 1.54 ಲಕ್ಷ ಜನರು ಇ ಗ್ರಂಥಾಲಯದಲ್ಲಿ ನೋಂದಣಿ...
ಲಾಕ್​ಡೌನ್ ಮುಂಚೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇ ಗ್ರಂಥಾಲಯ ಆರಂಭಿಸಿದ್ದು, 60 ದಿನಗಳಲ್ಲಿ 1.54 ಲಕ್ಷ ಜನರು ಇ ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡು ಪುಸ್ತಕಗಳನ್ನು ಓದುತ್ತಿದ್ದಾರೆ.

ಬೆಂಗಳೂರು ನಗರ 20,302, ಬಾಗಲಕೋಟೆ 12,687, ಬೆಳಗಾವಿ 10,225, ಬಳ್ಳಾರಿ 5,324, ಬೆಂಗಳೂರು ಗ್ರಾಮಾಂತರ 2,744, ಚಿತ್ರದುರ್ಗ 4,451, ದಕ್ಷಿಣ ಕನ್ನಡ 4,721, ಬೀದರ್ 2,872, ಚಾಮರಾಜನಗರ 2,367, ಚಿಕ್ಕಬಳ್ಳಾಪುರ 1,042, ಚಿಕ್ಕಮಗಳೂರು 2,863, ದಾವಣಗೆರೆ 2,992, ಧಾರವಾಡ 3,687, ಗದಗ 2,101, ಹಾಸನ 3,661, ಹಾವೇರಿ 3,009, ಕಲಬುರಗಿ 5,874, ಕೊಡಗು 1,344, ಕೋಲಾರ 2,276, ಕೊಪ್ಪಳ 3,041, ಮಂಡ್ಯ 4,183, ಮೈಸೂರು 3,629, ರಾಯಚೂರು 7,885, ರಾಮನಗರ 1,635, ಶಿವಮೊಗ್ಗ 2,137, ತುಮಕೂರು 4,766, ಉಡುಪಿ 1,058, ಉತ್ತರಕನ್ನಡ 1,005, ವಿಜಯಪುರ 4,255, ಯಾದಗಿರಿ 4,290 ಜನರು ಇ ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಪ್ರತಿದಿನ ಸುಮಾರು 1,500ಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಕೆ. ಹೊಸಮನಿ ತಿಳಿಸಿದ್ದಾರೆ.

ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದು, ಗ್ರಂಥಾಲಯಗಳ ಬಾಗಿಲು ತೆರೆಯಲು ಅವಕಾಶ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುರಕ್ಷಿತ ಅಂತರ ಸೇರಿ ಇನ್ನಿತರೆ ಕ್ರಮ ಅನುಸರಿಸಲಾಗುವುದು. ಸರಕಾರದಿಂದ ಒಪ್ಪಿಗೆ ಸಿಕ್ಕ ನಂತರ ಗ್ರಂಥಾಲಯ ತೆರೆಯಲಾಗುವುದು.
-ಸತೀಶ್ ಕುಮಾರ್ ಕೆ. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News