ಜು.20ರೊಳಗೆ ಪಿಯುಸಿ, ಜು.30ರೊಳಗೆ ಎಸೆಸೆಲ್ಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್

Update: 2020-05-29 18:13 GMT

ಮೈಸೂರು,ಮೇ.29: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು, ಮಕ್ಕಳ ದೃಷ್ಟಿಯಿಂದ ಇದಕ್ಕೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ನಗರದ ಅಬ್ದುಲ್ ನಜೀರ್‍ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಹೇಮಾವತಿ ಹಾಲ್‍ನಲ್ಲಿ ಶುಕ್ರವಾರ ಎಸೆಸೆಲ್ಸಿ ಪರೀಕ್ಷೆಯ ಪೂರ್ವಭಾವಿ ಕುರಿತು ಮೈಸೂರು,ಮಂಡ್ಯ ಮತ್ತು ಕೊಡಗು ಜಿಲ್ಲೆಗಳ ಡಿಡಿಪಿಐಗಳು, ಬಿಇಓಗಳು ಮತ್ತು ಶಿಕ್ಷಣ ಇಲಾಖೆಗೆ ಸೇರಿದ ಇತರೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪೂರ್ವ ನಿಗದಿಯಂತೆ ಮಾ.27ಕ್ಕೆ ಪರೀಕ್ಷೆ ನಡೆಬೇಕಿತ್ತು, ಆದರೆ ಕೊರೋನ ಹಿನ್ನಲೆಯಲ್ಲಿ ಅದನ್ನು ಮುಂದೂಡಾಗಿತ್ತು. ಎಸೆಸೆಲ್ಸಿ ಎಂಬುದು ಮಕ್ಕಳ ಭವಿಷ್ಯದ ಪ್ರಮುಖ ಘಟ್ಟವಾಗಿರುವುದರಿಂದ ಪರೀಕ್ಷೆ ಅನಿವಾರ್ಯ ಹಾಗಾಗಿ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ ಮಾಸ್ಕ್ ಗಳನ್ನು ವಿತರಿಸಿ, ಸ್ಯಾನಿಟೈಸರ್ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಹೊಗಲು ವ್ಯವಸ್ಥೆ ಮಾಡಲಾಗುವುದು. ಈ ಹಿಂದೆ ಪ್ರತಿ ರೂಂಗಳಲ್ಲಿ 24 ಮಕ್ಕಳನ್ನು ಕೂರಿಸುತಿದ್ದೆವು. ಆದರೆ ಸುರಕ್ಷಿತ ಅಂತರ ಕಾಪಾಡುವ ದೃಷ್ಠಿಯಿಂದ 18 ಮಕ್ಕಳನ್ನೇ ಕೂರಿಸಲಾಗುತ್ತದೆ. ಪ್ರತಿ ಮಕ್ಕಳು ಪರೀಕ್ಷಾ ಕೇಂದ್ರದೊಳಗೆ ತೆರಳುವ ಮುನ್ನ ಆರೋಗ್ಯ ಇಲಾಖೆ ವತಿಯಿಂದ ಥರ್ಮಲ್ ಸ್ಕ್ಯಾನ್ ಮಾಡಲು ಆರೋಗ್ಯ ಇಲಾಖೆ ಮುಂದೆ ಬಂದಿದೆ ಎಂದು ಹೇಳಿದರು.

ಎಸೆಸೆಲ್ಸಿ ಪರೀಕ್ಷೆ ಮುಂದೂಡುವಂತೆ ಹಲವರು ಸಲಹೆ ನೀಡಿದ್ದರು. ಈ ಸಂಬಂಧ ಹೈಕೋರ್ಟ್‍ನಲ್ಲಿ ಪಿಐಎಲ್ ಸಹ ಸಲ್ಲಿಸಲಾಗಿತ್ತು. ಕೋರ್ಟ್ ಪರೀಕ್ಷೆ ನಡೆಸಲು ಸೂಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಅದರಂತೆ ನಾವು ಮುಂಜಾಗ್ರತೆ ವಹಿಸಿದ್ದೇವೆ. ಪರೀಕ್ಷೆ ಮುಂದೂಡಬೇಕಾ ಬೇಡವಾ ಎಂದು ಪೋಷಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ. ಅವರು ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಲಸೆ ಕಾರ್ಮಿಕರ ಮಕ್ಕಳಿಗೆ ಸ್ಥಳೀಯ ಕೇಂದ್ರಗಳಲ್ಲಿ ಅವಕಾಶ: ಎಸೆಸೆಲ್ಸಿ ಪರೀಕ್ಷೆಗೆ ತಯಾಗಿರುವ ವಲಸೆ ಕಾರ್ಮಿಕರ ಮಕ್ಕಳು ಅವರ ನಿಗದಿತ ಕೇಂದ್ರದಲ್ಲೇ ಪರೀಕ್ಷೆ ಬರೆಯಬೇಕು ಎಂದಿಲ್ಲ. ಅವರು ಎಲ್ಲಿ ಇರುತ್ತಾರೊ ಅಲ್ಲಿನ ಹತ್ತಿರದ ಪರೀಕ್ಷಾ ಕೇಂದ್ರದಲ್ಲೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಮಕ್ಕಳು ಆತಂಕ ಪಡದೆ ಪರೀಕ್ಷೆ ಎದುರಿಸಬಹುದು. ಅವರ ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ಮುಂಚಿತವಾಗಿ ತೆರಳಿ ತಮ್ಮ ರಿಜಿಸ್ಟರ್ ನಂ. ತೋರಿಸಿದರೆ ಅವರು ಅವಕಾಶ ಕಲ್ಪಿಸಲಿದ್ದಾರೆ ಎಂದು ಹೇಳಿದರು.

ಎಸೆಸೆಲ್ಸಿ ಸಹಾಯವಾಣಿ ಆರಂಭ: ಮಕ್ಕಳ ಪರೀಕ್ಷಾ ಸಂಬಂಧ ಕುರಿತು ಅವರಿಗೆ ಬೇಕಾದ ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸೆಸೆಲ್ಸಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಈ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ಉಚಿತ ಸಾರಿಗೆ ವ್ಯವಸ್ಥೆ: ಎಸೆಸೆಲ್ಸಿ ಪರೀಕ್ಷೆ ಬರೆಯಲು ಬೇರೆ ಕಡೆಗಳಿಗೆ ತೆರಳುವ ಮಕ್ಕಳಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಬಂಧ ಕೆಎಸ್‍ಆರ್‍ಟಿಸಿ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಹಾಗಾಗಿ ಪರೀಕ್ಷೆಯ ಆಲ್‍ಟಿಕೆಟ್ ಹೊಂದಿರುವ ಮಕ್ಕಳಿಗೆ ಉಚಿತವಾಗಿ ಕರೆದುಕೊಂಡು ಬರಲಾಗುವುದು ಎಂದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೆ ಬೇಟಿ ನೀಡಿ ಎಸೆಸೆಲ್ಸಿ ಪರೀಕ್ಷೆ ಸಂಬಂಧ ಪೂರ್ವಭಾವಿ ಸಭೆಗಳನ್ನು ನಡೆಸುತಿದ್ದೇನೆ. ಎಲ್ಲಾ ಸಿದ್ದತೆಗಳನ್ನು ಆಯಾ ಉಪನಿರ್ದೇಶಕರ ನೇತೃತ್ವದಲ್ಲಿ ಮಾಡಿಕೊಳ್ಳಲಾಗಿದೆ. ಕಂದಾಯ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಯಾವುದೇ ಆತಂಕವಿಲ್ಲದೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇಂಗ್ಲೀಷ್ ವಿಷಯ ಬಾಕಿ ಇದ್ದು ಅದನ್ನು ಜೂ.18 ರಂದು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಪ್ರಾರಂಭವಾಗಿದ್ದು, ಜು.20 ರೊಳಗೆ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದರು. ಎಸೆಸೆಲ್ಸಿ ಪರೀಕ್ಷೆ ಜೂ.25 ರಿಂದ ಜು.4 ರವರೆಗೆ ನಡೆಯಲಿದ್ದು, ಜು.30 ರೊಳಗೆ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಮಾಡುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಜಿಲ್ಲೆ ಡಿಡಿಪಿಐ ಪಾಂಡುರಂಗ, ಮಂಡ್ಯ ಡಿಡಿಪಿಐ ರಘುನಂದನ್, ಕೊಡಗು ಡಿಡಿಪಿಐ ಮಚ್ಚಾಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News