ಒಂದೇ ರವಿವಾರಕ್ಕೆ ಅಂತ್ಯವಾದ ಕರ್ಫ್ಯೂ: ದೈನಂದಿನ ಚಟುವಟಿಕೆಗಳು, ಸಂಚಾರಕ್ಕೆ ಅನುಮತಿ

Update: 2020-05-30 11:22 GMT

ಬೆಂಗಳೂರು, ಮೇ 30: ಕೊರೋನ ಸೋಂಕಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಪ್ರತಿ ರವಿವಾರ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ್ದ ರಾಜ್ಯ ಸರಕಾರ, ದಿಢೀರ್ ತನ್ನ ನಿರ್ಧಾರ ಹಿಂತೆಗೆದುಕೊಂಡಿದ್ದು, ನಾಳೆ(ಮೇ 31) ಎಂದಿನಂತೆ ದೈನಂದಿನ ಚಟುವಟಿಕೆಗಳು ಕಾರ್ಯ ನಿರ್ವಹಿಸಲಿವೆ.

ಶನಿವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ರವಿವಾರದಂದು ಪೂರ್ಣ ಪ್ರಮಾಣದ ಲಾಕ್ ಡೌನ್ ಆದೇಶ ಮಾರ್ಪಡಿಸಿ ಮೇ 31 ಬೆಳಗ್ಗೆ 7ಗಂಟೆಯಿಂದ ರಾತ್ರಿ 7ಗಂಟೆವರೆಗೂ ಕರ್ಫ್ಯೂ ತೆರವುಗೊಳಿಸಿ ವಿನಾಯಿತಿ ನೀಡಿ ಆದೇಶಿಸಲಾಗಿದೆ. ಆದರೆ ರಾತ್ರಿ 7ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ಯಥಾಪ್ರಕಾರ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.

ಸಾರಿಗೆ ಸಂಚಾರ ಎಂದಿನಂತೆ

ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 7ರಿಂದ ಸಂಜೆ 7ಗಂಟೆಯವರೆಗೆ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳ ಸೇವೆ ಎಂದಿನಂತೆ ಇರಲಿದೆ. ರಾಜ್ಯ ಸರಕಾರ ಲಾಕ್‍ಡೌನ್ ತೆರವು ಮಾಡಿರುವುದರಿಂದ ಯಥಾರೀತಿ ಪ್ರಯಾಣಿಕರಿಗೆ ಬಸ್ ಸೇವೆ ಒದಗಿಸುವುದಾಗಿ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News