ಮತೀಯ ದ್ವೇಷಕ್ಕೆ ಕುಮ್ಮಕ್ಕು ನೀಡಿದ್ದು ಕೇಂದ್ರದ 1 ವರ್ಷದ ಸಾಧನೆ: ಡಿ.ಕೆ.ಶಿವಕುಮಾರ್

Update: 2020-05-30 13:13 GMT

ಬೆಂಗಳೂರು, ಮೇ 30: ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಕಟ್ಟಲು, ಪ್ರಜಾತಂತ್ರ ವ್ಯವಸ್ಥೆ ಉಳಿಸಿಕೊಳ್ಳಲು ಮಾಡಿದ ಹೋರಾಟದಿಂದ ಸಂವಿಧಾನ, ಗಣರಾಜ್ಯವನ್ನು ಕಂಡುಕೊಂಡೆವು. ಆದರೆ, ಇಂದು ಈ ಸಂವಿಧಾನ ಹಾಗೂ ಗಣರಾಜ್ಯ ವ್ಯವಸ್ಥೆಯನ್ನೆ ಬದಲಿಸಲು ಕೇಂದ್ರ ಸರಕಾರ ಮುಂದಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಪ್ರತಿ ಹಂತದಲ್ಲೂ ಹದಗೆಡುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ಇಂದು ಪ್ರತಿ ಡಾಲರ್ ಗೆ 75.52 ರೂಪಾಯಿಗೆ ತಲುಪಿದೆ ಎಂದರು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಕುಸಿದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಕಚ್ಚಾ ತೈಲ ಬೆಲೆ ಐತಿಹಾಸಿಕ ಪ್ರಮಾಣದಲ್ಲಿ ಕುಸಿದಿದ್ದರೂ, ಅದರ ಲಾಭ ಜನರಿಗೆ ನೀಡದೆ ಕೇಂದ್ರ ಸರಕಾರ ಸುಲಿಗೆ ಮಾಡುತ್ತಿದೆ. ಇದರ ಲಾಭ ಕೇವಲ ಸರಕಾರ ಪಡೆದುಕೊಳ್ಳುತ್ತಿರುವುದು ಇದೇ ಮೊದಲು ಎಂದು ಅವರು ದೂರಿದರು.

ಭಾರತದಲ್ಲಿ ಸದ್ಯ ಪ್ರತಿ ಪೆಟ್ರೋಲ್ ಮೂಲ ಬೆಲೆ 18 ರಿಂದ 20 ರೂಪಾಯಿ ಇದ್ದರೆ ಉಳಿದೆಲ್ಲವೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತೆರಿಗೆ ಹೆಸರಲ್ಲಿ ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಸರಕಾರವೇ ಪ್ರತಿ ಲೀಟರ್ ಗೆ ಸುಮಾರು 30 ರಿಂದ 33 ರೂಪಾಯಿಯಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಕೊರೋನ ಪೂರ್ವದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಜಿಡಿಪಿ ಶೇ.3.1ಕ್ಕೆ ಕುಸಿತ ಕಂಡಿತ್ತು. ಈಗ ಅದು ಮತ್ತಷ್ಟು ಕುಸಿತ ಕಂಡಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಆಟೋಮೊಬೈಲ್, ಮ್ಯಾನುಫ್ಯಾಕ್ಚರ್, ಕೃಷಿ, ರಿಯಲ್ ಎಸ್ಟೇಟ್, ಕನ್‍ಸ್ಟ್ರಕ್ಷನ್ ಸೇರಿದಂತೆ ಬಹುತೇಕ ಎಲ್ಲ ವಲಯಗಳೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. 40 ವರ್ಷಗಳಲ್ಲೆ ದಾಖಲೆ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.25ರಿಂದ ಶೇ.28ರವರೆಗೂ ತಲುಪಿದೆ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರಕಾರದ ಕಳೆದೊಂದು ವರ್ಷದ ಸಾಧನೆ ಎಂದರೆ ಅದು ಮತೀಯ ದ್ವೇಷಕ್ಕೆ ಕುಮ್ಮಕ್ಕು ನೀಡಿದ್ದು. ಸಿಎಎ ವಿಚಾರದಿಂದ ಹಿಡಿದು, ಕೊರೋನ ವಿಚಾರದವರೆಗೂ ಪ್ರತಿ ಹಂತದಲ್ಲೂ ಒಂದು ಕೋಮು, ಒಂದು ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಾ ದೇಶದ ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಭಾರತದಲ್ಲಿ ಭಾರತೀಯನೇ ತನ್ನ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿಕೊಳ್ಳುವಂತಹ ಸ್ಥಿತಿ ತಂದಿಟ್ಟರು ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಯಾವ ರೈತರಿಗೆ ಮಾರುಕಟ್ಟೆ ಕಲ್ಪಿಸಿ, ಎಷ್ಟು ಬೆಳೆ ಮಾರಾಟವಾಗಿ ಅವರಿಗೆ ಎಷ್ಟು ದುಡ್ಡು ಸಿಕ್ಕಿದೆ ಅಂತಾ ಪಟ್ಟಿ ನೀಡಲಿ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರನ್ನು ಅಸ್ಪೃಶ್ಯರಂತೆ ಕಂಡರು. ಕ್ಷೌರಿಕರು, ಆಟೋ, ಕ್ಯಾಬ್ ಚಾಲಕರು, ಮಡಿವಾಳರು ಸೇರಿದಂತೆ ಅನೇಕರ ಜೀವನ ಬೀದಿಗೆ ಬಿದ್ದಿದೆ. ಅವರಲ್ಲಿ ಯಾರಿಗೆ ಪರಿಹಾರ ಸಿಕ್ಕಿದೆ ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಪರಿಹಾರ ಘೋಷಿಸಿ ತಿಂಗಳಾಗುತ್ತಾ ಬಂದಿದೆ. ಈವರೆಗೂ ಯಾರಿಗಾದರೂ ಒಂದು ರೂಪಾಯಿ ತಲುಪಿದೆಯೆ? ಎಪ್ರಿಲ್ ತಿಂಗಳಲ್ಲೆ ಲಾಕ್‍ಡೌನ್‍ನಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ಮೋದಿ ಸರಕಾರದ ಸಾಧನೆ. ಕಾರ್ಮಿಕರನ್ನು ಪ್ರೀತಿಯಿಂದ ಕಾಣಲಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಅವರು ದೂರಿದರು.

ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿರುವ ಮೋದಿ ಸರಕಾರ ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರಗಳಿಗೆ ಒತ್ತಡ ಹೇರುವ ಮೂಲಕ ವಿದೇಶಿ ಕಂಪನಿಗಳ ಕೈಗೆ ರೈತರ ಜುಟ್ಟು ನೀಡುವ ಕುತಂತ್ರ ನಡೆಸಿದೆ ಎಂದು ಅವರು ಆರೋಪಿಸಿದರು.

ಇದಕ್ಕೂ ಮುನ್ನ ಏಷ್ಯಾ ರಾಷ್ಟ್ರಗಳ ಮುಕ್ತ ಮಾರುಕಟ್ಟೆಗೆ ಮುಂದಾಗಿದ್ದ ಕೇಂದ್ರ ಸರಕಾರ ವಿದೇಶಗಳ ಹಾಲು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ಪ್ರಯತ್ನಿಸಿತ್ತು. ಆಗ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಮೆತ್ತಗೆ ಜಾರಿಕೊಂಡ ಮೋದಿ, ಈಗ ಕೃಷಿ ಕ್ಷೇತ್ರಕ್ಕೆ ಬಹುರಾಷ್ಟ್ರೀಯ ಕಂಪನಿಗಳನ್ನು ತಂದು ರೈತರನ್ನು ನಿಯಂತ್ರಿಸಲು ಅವಕಾಶ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ನೆರೆ ವಿಚಾರದಿಂದ ಹಿಡಿದು, ನರೇಗಾ ಬಾಕಿ, ಆರ್ಥಿಕ ಹಣಕಾಸು ಹಂಚಿಕೆ, ಅನುದಾನದಿಂದ ಕೊರೋನ ವಿಚಾರದವರೆಗೂ ರಾಜ್ಯಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ. ಮೋದಿ ಘೋಷಿಸಿರುವ 20 ಲಕ್ಷ ಕೋಟಿಯ ಸುಳ್ಳಿನ ಪ್ಯಾಕೇಜ್‍ನಿಂದ ದೇಶದ ಜನಸಂಖ್ಯೆಯ ಶೇ. 10ರಷ್ಟು ಜನರಿಗೂ ಸಹಾಯವಾಗುವುದಿಲ್ಲ. ನರೇಗಾಗೇ ಶೇ.10ರಷ್ಟು ಹಣ ನೀಡಿದ್ದು ಬಿಟ್ಟರೆ ಉಳಿದೆಲ್ಲವೂ ಬ್ಯಾಂಕುಗಳಿಂದ ಸಾಲ ನೆರವು ನೀಡುತ್ತಾರಂತೆ ಎಂದು ಶಿವಕುಮಾರ್ ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ನಾಯಕರಾಗಲಿ, ಪದಾಧಿಕಾರಿಗಳಾಗಲಿ ಅಥವಾ ಕಾರ್ಯಕರ್ತರಾಗಲಿ, ಅನ್ಯ ರಾಜಕೀಯ ಪಕ್ಷಗಳ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಶಿವಕುಮಾರ್ ತಿಳಿಸಿದರು.

ಈ ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷದ ಅಧ್ಯಕ್ಷನಾಗಿ ನಾನು ಮಾತ್ರ ಮಾತನಾಡುತ್ತೇನೆ. ಸದ್ಯ ಪಕ್ಷವನ್ನು ಮತ್ತಷ್ಟು ಸಂಘಟಿಸುವುದು ಮತ್ತು ಸದೃಢಗೊಳಿಸಬೇಕಿದ್ದು, ಇದು ನಮ್ಮ ಏಕೈಕ ಗುರಿಯಾಗಿರಬೇಕು. ಈ ಗುರಿ ಸಾಧನೆಯತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.

ಈ ವರ್ಷ ದೇಶಕ್ಕೆ ಮಾರಕವಾದ ವರ್ಷ. ಕೇವಲ ಪ್ರಾಕೃತಿಕವಾಗಿ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವವರೂ ಈ ಮಾರಕಕ್ಕೆ ಕಾರಣ. ಆಡಳಿತದಲ್ಲಿನ ವೈಫಲ್ಯ, ಕಳಪೆ ನಾಯಕತ್ವದಿಂದ ದೇಶದಲ್ಲಿ ಪ್ರತಿಯೊಬ್ಬನ ಜೀವನ ನಾಶವಾಗುವಂತೆ ಮಾಡಿದೆ. ಜನ ಹಸಿವಿನಿಂದ ಸಾಯುತ್ತಿದ್ದಾರೆ. ಕಾರ್ಮಿಕರನ್ನು ಅಸ್ಪೃಷ್ಯರಂತೆ ಕಾಣುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಸರಕಾರಗಳು ವಿಫಲವಾಗಿದ್ದು, ದೇಶವನ್ನು ಶೂನ್ಯಕ್ಕೆ ತಂದು ನಿಲ್ಲಿಸಿದ್ದಾರೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News