ಮಸೀದಿ, ದರ್ಗಾಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗ

Update: 2020-05-30 14:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 30: ಕೋವಿಡ್-19 ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಎಲ್ಲ ಮಸೀದಿ ಹಾಗೂ ದರ್ಗಾಗಳು ಸಾರ್ವಜನಿಕರಿಗೆ ತೆರೆಯುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಪ್ರಾರ್ಥನೆ ಸಲ್ಲಿಸುವವರು ತಮ್ಮ ಮನೆಗಳಿಂದಲೇ ವುಝೂ(ಅಂಗಸ್ನಾನ) ಮಾಡಿಕೊಂಡು ಮಸೀದಿಗೆ ಬರಬೇಕು. ವುಝೂ ಕೊಳ(ಹೌಝ್) ಮಸೀದಿಯ ಆವರಣದಲ್ಲಿ ಇದ್ದಲ್ಲಿ, ಅದನ್ನು ಉಪಯೋಗಿಸದಂತೆ ಕ್ರಮ ಕೈಗೊಳ್ಳುವುದು ಹಾಗೂ ನಲ್ಲಿಗಳನ್ನು ಉಪಯೋಗಿಸಬೇಕು ಎಂದು ಅವರು ಹೇಳಿದ್ದಾರೆ.

ಶೌಚಾಲಯಗಳನ್ನು ಶುಚಿಯಾಗಿ ಇಡುವುದು ಹಾಗೂ ಅನಿವಾರ್ಯತೆ ಉಂಟಾದಲ್ಲಿ ಮಾತ್ರ ಬಳಸುವುದು, ಮಸೀದಿಯ ಒಳಗೆ ಮತ್ತು ಹೊರಗೆ ಪ್ರವೇಶಿಸಲು ಒಂದೇ ದ್ವಾರವನ್ನು ಇಡಬೇಕು, ಪ್ರತಿಯೊಂದು ಪ್ರಾರ್ಥನೆಯ ಮುನ್ನ ಪ್ರಾರ್ಥನಾ ಸಭಾಂಗಣಕ್ಕೆ ಔಷಧಿಯನ್ನು ಸಿಂಪಡಿಸಬೇಕು ಎಂದು ಅಬ್ದುಲ್ ಅಝೀಮ್ ತಿಳಿಸಿದ್ದಾರೆ.

ಪ್ರಾರ್ಥನೆ ಸಲ್ಲಿಸುವವರು ಪ್ರಾರ್ಥನಾ ಸಭಾಂಗಣಕ್ಕೆ ಪ್ರವೇಶಿಸುವ ಮುನ್ನ ದೇಹದ ತಾಪಮಾನವನ್ನು ಪರೀಕ್ಷಿಸಿಕೊಳ್ಳಬೇಕು. ಮಸೀದಿಯೊಳಗೆ ಪ್ರಾರ್ಥನೆಯ ಸಮಯದಲ್ಲಿ ಕನಿಷ್ಠ 1ರಿಂದ 2 ಮೀಟರಿನಷ್ಟು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರಾರ್ಥನೆ ಸಲ್ಲಿಸುವವರು ತಮ್ಮ ಚಾಪೆಯನ್ನು ತರಬೇಕು. 10-15 ನಿಮಿಷಗಳಲ್ಲಿ ಕಡ್ಡಾಯ ಪ್ರಾರ್ಥನೆಯನ್ನು(ಫರ್ಝ್ ನಮಾಝ್) ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಮಸೀದಿಯಲ್ಲಿ ಜನರು ಅಧಿಕ ಸಂಖ್ಯೆಯಲ್ಲಿದ್ದಲ್ಲಿ ಎರಡು ಜಮಾತ್‍ಗಳನ್ನು ಆಯೋಜಿಸಬೇಕು. ಸುನ್ನತ್ ಹಾಗೂ ನಫಿಲ್ ನಮಾಝ್‍ಗಳನ್ನು ತಮ್ಮ ಮನೆಗಳಲ್ಲಿಯೇ ನಿರ್ವಹಿಸಬೇಕು. ಪ್ರಾರ್ಥನೆಯ ನಂತರ ಎಲ್ಲರೂ ತಕ್ಷಣ ಮಸೀದಿಗಳಿಂದ ನಿರ್ಗಮಿಸಬೇಕು ಹಾಗೂ ಮಸೀದಿಯ ಆವರಣದಲ್ಲಿ ಯಾವುದೇ ರೀತಿಯ ಚರ್ಚೆಗಳನ್ನು ನಡೆಸದಂತೆ ನಿಷೇಧಿಸಬೇಕು ಎಂದು ಅಬ್ದುಲ್ ಅಝೀಮ್ ತಿಳಿಸಿದ್ದಾರೆ.

ಶುಕ್ರವಾರದ ವಿಶೇಷ ಪ್ರಾರ್ಥನೆಯ ಖುತ್ಬಾ ಆದಷ್ಟು ಸಂಕ್ಷಿಪ್ತವಾಗಿ ಮುಗಿಸಿ, ಪ್ರಾರ್ಥನೆಯನ್ನು 15-20 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಮಸೀದಿಗಳು ಹಾಗೂ ದರ್ಗಾಗಳ ಆವರಣಗಳಲ್ಲಿ ಭಿಕ್ಷಾಟನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದರಿಂದ ಭಿಕ್ಷಾಟನೆಯನ್ನು ನಿಷೇಧಿಸಬೇಕು ಎಂದು ಅವರು ಸೂಚಿಸಿದ್ದಾರೆ.

ದರ್ಗಾಗಳಲ್ಲಿ ಸಿಹಿ ನೀಡುವುದು ಹಾಗೂ ಸ್ವೀಕರಿಸುವುದನ್ನು ನಿಷೇಧಿಸಬೇಕು. ಗೋರಿಗಳನ್ನು ಮುಟ್ಟುವುದನ್ನು ನಿಷೇಧಿಸಬೇಕು. ಅಪ್ಪುಗೆ ಮತ್ತು ಕೈ ಕುಲುಕುವುದನ್ನು ಆದಷ್ಟು ತಪ್ಪಿಸಿ ಎಂದು ಅಬ್ದುಲ್ ಅಝೀಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News