ಭಾರತದ ಜಿಡಿಪಿ ಪಾಕ್, ಬಾಂಗ್ಲಾ, ನೇಪಾಳದ ಜಿಡಿಪಿಗಿಂತಲೂ ಕಡಿಮೆ ಇದೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2020-05-30 14:50 GMT

ಬೆಂಗಳೂರು, ಮೇ 30: ಮಾತು ಮಾತಿಗೆ ಪಾಕಿಸ್ತಾನದ ಕಡೆ ಬೊಟ್ಟು ಮಾಡುವ ಬಿಜೆಪಿಗರೇ, ಈ ಸಾಲಿನ ಭಾರತದ ಜಿಡಿಪಿ ಪಾಕಿಸ್ತಾನ ಮಾತ್ರವಲ್ಲ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದ ಜಿಡಿಪಿಗಿಂತಲೂ ಕಡಿಮೆ ಇದೆ ಎನ್ನುವುದು ಗೋತ್ತಾ? ಇದಕ್ಕೆ ಯಾರು ಹೋಣೆ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ನಾಯಕತ್ವ ಮತ್ತು ಸಾಮರ್ಥ್ಯವನ್ನು ಭಾವನಾತ್ಮಕ ವಿಚಾರಗಳಿಂದ ಅಥವಾ ಭಾಷಣಗಳಿಂದ ಅಳೆಯುವುದಲ್ಲ. ದೇಶದ ಜನರ ಬದುಕಿನಲ್ಲಿ ಏನು ಬದಲಾವಣೆ ತಂದಿದ್ದಾರೆ ಎಂಬುದು ಮುಖ್ಯ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಭಯದಿಂದ ಪ್ರಧಾನಿಗಳು ಪತ್ರದ ಮೂಲಕ ತಮ್ಮ ವೈಫಲ್ಯಗಳನ್ನು ಸಾಧನೆಗಳೆಂದು ಹೇಳಲು ಹೊರಟಿದ್ದಾರೆ ಎಂದು ಟೀಕಿಸಿದರು.

'ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿರುವುದರಿಂದ ರೈತರ ಆದಾಯ ಸ್ಥಿರವಾಗಿದೆ ಎಂದು ಮೋದಿಯವರು ಪತ್ರದಲ್ಲಿ ಹೇಳಿದ್ದಾರೆ. ಆದರೆ, ನಮ್ಮದೇ ರಾಜ್ಯದ ಬೀದರ್, ಕಲಬುರಗಿ, ರಾಯಚೂರು ಭಾಗದಲ್ಲಿ ಬೆಳೆದ ತೊಗರಿ ಬೇಳೆ ಕೊಳ್ಳುವವರಿಲ್ಲದೆ ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಇತರೆ ಬೆಳೆಗಳನ್ನು ಬೆಳೆದ ರೈತರ ಪಾಡು ಇದಕ್ಕಿಂತ ಭಿನ್ನವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿಯವರೇ..ನಿಮಗೆ ನಿಜವಾಗಿ ರೈತರ ಬಗ್ಗೆ ಕಾಳಜಿಯಿದ್ದರೆ ವಿರೋಧ ಪಕ್ಷಗಳು, ರೈತರ ವಿರೋಧದ ಹೊರತಾಗಿಯೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಏಕೆ ಮಾಡಿದ್ದು? ಬಂಡವಾಳಶಾಹಿಗಳು ಮತ್ತು ಉದ್ದಿಮೆದಾರರನ್ನು ಉದ್ಧಾರ ಮಾಡಲು ಕಾಯ್ದೆಗೆ ತಿದ್ದುಪಡಿ ತಂದು, ರೈತರ ಬಗ್ಗೆ ಕಾಳಜಿ ಇದೆ ಎಂದರೆ ಹೇಗೆ?' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿಯವರೇ..ತ್ರಿವಳಿ ತಲಾಖ್, ಆರ್ಟಿಕಲ್ 370 ರದ್ದತಿ ಬದಿಗಿಡಿ, ಉದ್ಯೋಗ ಸೃಷ್ಟಿ, ಕೃಷಿ, ಕೈಗಾರಿಕೆ, ಸೇವಾ ವಲಯ, ಬಂಡವಾಳ ಹೂಡಿಕೆಯ ಬೆಳವಣಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಜನರಿಗೆ ತೋರಿಸಿ ನಿಮ್ಮ ಸಾಧನೆ ಏನೆಂದು ಎಲ್ಲರೂ ನೋಡಲಿ' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಂದು ಕೇಂದ್ರ ಸರಕಾರದ ಅಂಕಿ-ಅಂಶಗಳ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಡಿಪಿ ಕಳೆದ ಡಿಸೆಂಬರ್ ಅಂತ್ಯಕ್ಕೆ ಶೇ.4.1ಕ್ಕೆ ತಲುಪಿದೆ. ಇದು ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ.3.1ಕ್ಕೆ ಇಳಿದಿದೆ. ಕಳೆದ ಹನ್ನೊಂದು ವರ್ಷಗಳಲ್ಲೆ ಇದು ಕನಿಷ್ಠ ದರ ಎಂದು ಸಿದ್ದರಾಮಯ್ಯ ಟೀಕಿಸಿದರು.

ಪ್ರಧಾನಿ ಮೋದಿಯವರೇ ಮೊದಲ ಅವಧಿಯಲ್ಲಿ ನೀವು ನೀಡಿದ್ದ ಕಪ್ಪು ಹಣ ವಾಪಸ್, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಬಗೆಗಿನ ಆಶ್ವಾಸನೆಗಳೇನಾಯ್ತು? ಇವುಗಳ ಬಗ್ಗೆ ಜನತೆಗೆ ಬರೆದಿದ್ದ ಪತ್ರದಲ್ಲಿ ತಿಳಿಸಬೇಕಿತ್ತಲ್ಲಾ?' ಎಂದು ಸಿದ್ದರಾಮಯ್ಯ ಇದೇ ವೇಳೆ ಆಗ್ರಹಿಸಿದರು.

ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದೆ. ಮೊದಲ ಅವಧಿಯಲ್ಲಿನ ವೈಫಲ್ಯಗಳ ಸರಣಿ ಎರಡನೆ ಅವಧಿಯಲ್ಲಿಯೂ ಮುಂದುವರಿದಿದ್ದು, ಅವರ ಆಡಳಿತ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಹೇಳಿದ್ದ ಸುಳ್ಳುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದೇ ಪ್ರಧಾನಿ ಮೋದಿಯವರ ಕಳೆದ ಒಂದು ವರ್ಷದ ಸಾಧನೆ. ನಿನ್ನೆ ಅವರು ದೇಶದ ಜನರನ್ನು ಕುರಿತು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಸಂವಿಧಾನದ 370ನೆ ವಿಧಿ ರದ್ದತಿ, ರಾಮಮಂದಿರ, ತ್ರಿವಳಿ ತಲಾಖ್ ರದ್ದತಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಬಿಟ್ಟು ದೇಶದ ಬಡವರು, ರೈತರು, ಕಾರ್ಮಿಕರು, ಮಹಿಳೆಯರಿಗಾಗಿ ಏನು ಮಾಡಿದ್ದೀರಿ?'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News