ಕೇಂದ್ರದ ನೂತನ ಮಾರ್ಗಸೂಚಿ ಅನುಸಾರ ಬಸ್ ಸಂಚಾರ: ಲಕ್ಷ್ಮಣ ಸವದಿ

Update: 2020-05-30 14:56 GMT

ಹಾವೇರಿ, ಮೇ 30: ಕೋವಿಡ್-19 ನಾಲ್ಕನೆ ಹಂತದ ಲಾಕ್‍ಡೌನ್ ಅವಧಿ ನಾಳೆ(ಮೇ 31) ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮುಂದಿನ ಮಾರ್ಗಸೂಚಿ ಪ್ರಕಟವಾದ ನಂತರ ರಾಜ್ಯದಲ್ಲಿ ಬಸ್ ಸಂಚಾರದ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗ ಬಸ್‍ನಲ್ಲಿ ಶೇ.30ಕ್ಕಿಂತ ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯುವ ನಿಯಮದಿಂದಾಗಿ ಸಾರಿಗೆ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ನಾಲ್ಕು ಸಾರಿಗೆ ವಿಭಾಗಗಳಿಂದ ಒಟ್ಟಾರೆ 1,800 ಕೋಟಿ ರೂ.ನಷ್ಟ ಉಂಟಾಗಿದೆ ಎಂದರು.

ರಾಜ್ಯ ಸರಕಾರದಿಂದ ವಿದ್ಯಾರ್ಥಿಗಳ ಬಸ್‍ಪಾಸ್ ಪ್ರೋತ್ಸಾಹ ಧನ ನಾಲ್ಕು ನಿಗಮಗಳಿಗೂ ಒಟ್ಟು 2,960 ಕೋಟಿ ರೂ.ಬಾಕಿ ಬರಬೇಕಿದೆ. ಈ ಹಣವನ್ನು ಸರಕಾರದ ವತಿಯಿಂದ ಹಂತ, ಹಂತವಾಗಿ ಪಡೆದು ಸಾರಿಗೆ ಸಿಬ್ಬಂದಿಗಳ ವೇತನ ಸೇರಿದಂತೆ ಇಲಾಖೆಯ ನಿರ್ವಹಣೆಗೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಸಾರಿಗೆ ಇಲಾಖೆ ನಷ್ಟ ಅನುಭವಿಸಿದರೂ ಸಾರ್ವಜನಿಕ ಸೇವೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಿಸಲಾಗಿದೆ. ಈ ಸಂದರ್ಭದಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ವೆಚ್ಚದಲ್ಲಿ ಕಡಿಮೆ, ಆದಾಯ ಸೋರಿಕೆ ಕಡಿಮೆ ಮಾಡುವುದು, ನಿರ್ವಹಣೆಯ ವೆಚ್ಚ ಕಡಿತ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News