ಮೌಲ್ಯಮಾಪನಕ್ಕೆ ಕಡ್ಡಾಯ ಹಾಜರಾಗಲೇಬೇಕೆಂಬ ಸರಕಾರದ ಧೋರಣೆ ಖಂಡನೀಯ: ಕುಮಾರಸ್ವಾಮಿ

Update: 2020-05-30 16:20 GMT

ಬೆಂಗಳೂರು, ಮೇ 30: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರಿಕರಣಕ್ಕೆ ಆದ್ಯತೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಮೌಲ್ಯಮಾಪನಕ್ಕಾಗಿ ಉಪನ್ಯಾಸಕರು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸುವಂತಹ ಸಂದರ್ಭವನ್ನು ರಾಜ್ಯ ಸರಕಾರ ತಪ್ಪಿಸಬೇಕು. ಆಯಾ ಜಿಲ್ಲಾ ಕೇಂದ್ರಗಳಲ್ಲಿಯೇ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಟ್ಟರೆ ಹೆಚ್ಚು ಉಪಯೋಗವಾಗುತ್ತದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸಬೇಕು.

ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕಾಗಿ ದೂರದ ಊರುಗಳಿಂದ ಬರುವ ಉಪನ್ಯಾಸಕರಿಗೆ ಸೂಕ್ತ ವಸತಿ, ಸಾರಿಗೆ ಮತ್ತು ಹೊಟೇಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಮೌಲ್ಯಮಾಪನ ಮಾಡುವುದು ಸಾಕಷ್ಟು ಸಮಸ್ಯೆಗೆ ಈಡಾಗಬೇಕಾಗುತ್ತದೆ. ಇದನ್ನು ಸರಿಪಡಿಸುವ ಗೋಜಿಗೆ ಹೋಗದೆ ಮೌಲ್ಯಮಾಪನಕ್ಕೆ ಕಡ್ಡಾಯವಾಗಿ ಹಾಜರಾಗಲೇಬೇಕೆಂಬ ಸರಕಾರದ ಧೋರಣೆ ಖಂಡನೀಯ.

ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಯಲು ಜೂ.18ರವರೆಗೆ ಕಾಲಾವಕಾಶವಿದ್ದು, ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತವಾದ ತೀರ್ಮಾನಗಳನ್ನು ಕೈಗೊಳ್ಳಬೇಕು. ಅದನ್ನು ಬಿಟ್ಟು ಸರಕಾರ ಹಾಗೂ ಇಲಾಖಾ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವುದು ಬೇಡವೆಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News