ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ

Update: 2020-05-30 17:16 GMT

ಬೆಂಗಳೂರು, ಮೇ 30: ಈ ಹಿಂದಿನ ಮೈತ್ರಿ ಸರಕಾರದ ಪತನಕ್ಕೆ ಪಾತ್ರವಹಿಸಿ, ಆಪರೇಷನ್ ಕಮಲದ ರೂವಾರಿ ಎಂದೇ ಬಿಂಬಿತವಾಗಿದ್ದ ಎನ್.ಆರ್.ಸಂತೋಷ್ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಆಗಿ ನೇಮಿಸಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಎನ್.ಆರ್.ಸಂತೋಷ್, ಆಪರೇಷನ್ ಕಮಲದ ವೇಳೆ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದ್ದು, ಸಂತೋಷ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಕೂಡ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲದೆ, ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಆಪ್ತ ವಿನಯ್ ಅವರನ್ನು 2017ರ ಮೇ 11ರಂದು ರೌಡಿಶೀಟರ್ ಸೇರಿದಂತೆ ಹಲವರು ಅಪಹರಿಸಿ ಹಲ್ಲೆ ನಡೆಸಿದ್ದರು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದರಲ್ಲಿ ಎನ್.ಆರ್.ಸಂತೋಷ್ ಹೆಸರು ಕೇಳಿಬಂದಿತ್ತು.

ಅಸಮಾಧಾನ: ಹಿರಿಯ ಶಾಸಕರು, ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ಮುಖಂಡರನ್ನು ಹೊರಗಿಟ್ಟು, ಎನ್.ಆರ್.ಸಂತೋಷ್‍ಗೆ ಉನ್ನತ ಸ್ಥಾನ ನೀಡಿರುವ ಕುರಿತು ಬಿಜೆಪಿ ಪಕ್ಷದ ಕೆಲ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News