ಕೋವಿಡ್ ವಿರುದ್ಧ ಹೋರಾಟದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಸಲೀಂ ಅಹ್ಮದ್

Update: 2020-05-30 17:49 GMT

ಶಿವಮೊಗ್ಗ, ಮೇ.30: ಕೋವಿಡ್-19 ವಿರುದ್ಧ ಹೋರಾಟ ನಡೆಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನದ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿತ್ತು. ಆದರೆ ಸರ್ಕಾರ ಕೊರೋನ ನಿಯಂತ್ರಿಸುವಲ್ಲಿ ವಿಫಲವಾಗಿರುವುದಷ್ಟೆ ಅಲ್ಲದೇ ಕೊರೋನ ಉಪಕರಣಗಳ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದೆ ಎಂದು ಆಪಾದಿಸಿದರು.

ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರೂ ಕೂಡ ಸರ್ಕಾರ ಅದನ್ನು ನಿರಾಕರಿಸಿ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು. ಕೊರೋನದಂತಹ ಸಂಕಷ್ಟ ಸಂದರ್ಭದಲ್ಲಿಯೂ ರಾಜ್ಯ ಬಿಜೆಪಿ ಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಧಿಕಾರಕ್ಕೆ ಜೋತುಬಿದ್ದಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ನಡುವಿನ ಕಚ್ಚಾಟ ಖಂಡನೀಯ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಜೂ.7 ರಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ  ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೇವಲ 150 ಕಾರ್ಯಕರ್ತರು ಮತ್ತು ಮುಖಂಡರು ಮಾತ್ರ ಹಾಜರಿರುತ್ತಾರೆ. ಆದರೆ ರಾಜ್ಯದ 8 ಸಾವಿರ ಸ್ಥಳಗಳಲ್ಲೀ ಏಕ ಕಾಲದಲ್ಲಿ ಪದಗ್ರಹಣ ಸಮಾರಂಭದ ನೇರಪ್ರಸಾರ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದರು. ವಲಸೆ ಕಾರ್ಮಿಕರ ಬಗ್ಗೆ ತೆಗೆದುಕೊಂಡ ನಿರ್ಧಾರ, ಕಿಟ್ ಸೇರಿದಂತೆ ಕೋವಿಡ್ ಉಪಕರಣಗಳ ಖರೀದಿಯಲ್ಲಿ ಆದ ಭ್ರಷ್ಟಾಚಾರ ಇದೆಲ್ಲವೂ ಜನರಿಗೆ ತಿಳಿಯಬೇಕು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡರುಗಳಾದ ಆಗ ಸುಲ್ತಾನ್, ಎನ್.ರಮೇಶ್, ಹೆಚ್. ಸಿ.ಯೋಗೀಶ್, ವೈ.ಹೆಚ್. ನಾಗರಾಜ, ಚಂದ್ರಭೂಪಾಲ, ಕಲಗೋಡು ರತ್ನಾಕರ್ ಇದ್ದರು.

ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ಕ್ರಮಕೈಗೊಳ್ಳಲೇ ಇಲ್ಲ. ಬಸ್ ನಿಲ್ದಾಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರ ಅಳಲನ್ನು ನೋಡಿದರೆ ಸಂಕಟವಾಗುತ್ತಿತ್ತು. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಆದರೆ ಕೇವಲ  2200 ಕೋಟಿಯಷ್ಟೆ ನೀಡಿದೆ. ಮತ್ತಷ್ಟು ಅನುದಾನ ಘೋಷಿಸಬೇಕು.
-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News