ಕೋವಿಡ್-19 ಟೆಸ್ಟಿಂಗ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ವೆಲ್ಫೇರ್ ಪಾರ್ಟಿ ಒತ್ತಾಯ

Update: 2020-05-30 17:51 GMT

ಬೆಂಗಳೂರು, ಮೇ 30: ಕೋವಿಡ್- 19ರ ಹೋರಾಟದಲ್ಲಿ ತೊಡಗಿದ ಆರೋಗ್ಯ ಸಿಬ್ಬಂದಿಗೆ ಕೊಡಲಾಗುವ ಸುರಕ್ಷಾ ಸಾಮಗ್ರಿಗಳಾದ ಪಿಪಿಇ ಕಿಟ್, ಕೊರೋನ ಟೆಸ್ಟಿಂಗ್ ಕಿಟ್, ಸ್ಯಾನಿಟೈಸರ್ ಗಳು ಕಳಪೆ ಗುಣಮಟ್ಟದ್ದಾಗಿದ್ದು ಮತ್ತು ಅಂತಹ ಕಳಪೆ ಸಾಮಗ್ರಿಗಳ ಖರೀದಿಸುವಲ್ಲಿಯೂ ದುಬಾರಿ ಬೆಲೆ ನೀಡಿ ಖರೀದಿಸಿ, ರಾಜ್ಯ ಸರಕಾರ ಅಕ್ರಮ ಎಸಗಿದೆಯೆಂಬ ಆಘಾತಕಾರಿ ಸುದ್ದಿ ಪತ್ರಿಕೆಗಳಲ್ಲಿ ಬಹಿರಂಗಗೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ತಿಳಿಸಿದ್ದಾರೆ.

ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಎಚ್.ಕೆ.ಪಾಟೀಲ್ ನೇತೃತ್ವದ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ಬಂದಿದೆಯೆಂದು ವರದಿಯಾಗಿದೆ. ಇನ್ನೊಂದೆಡೆ ಈ ತನಿಖೆಯನ್ನು ನಿರ್ಬಂಧಿಸುವ ಖಂಡನಾರ್ಹ ಪ್ರಯತ್ನವು ನಡೆದಿದೆ ಎನ್ನಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಭ್ರಷ್ಟಾಚಾರ ಮತ್ತು ಪಿಪಿಇ ಹಾಗೂ ಟೆಸ್ಟಿಂಗ್ ಕಿಟ್‍ಗಳ ಕಳಪೆತನದ ಬಹಿರಂಗವು ಸಾರ್ವಜನಿಕರು ಹಾಗೂ ಕೋವಿಡ್ ಹೋರಾಟದಲ್ಲಿ ನೇರವಾಗಿ ತೊಡಗಿರುವ ಆರೋಗ್ಯ ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸಿದೆ ಎಂದು ಹಬೀಬುಲ್ಲಾ ಖಾನ್ ತಿಳಿಸಿದ್ದಾರೆ.

ನೂರಾರು ಕೋಟಿ ರೂ.ಗಳ ಈ ಅವ್ಯವಹಾರವು ಸಾರ್ವಜನಿಕರ ಆರೋಗ್ಯದ ಮತ್ತು ಪ್ರಾಣದ ಜೊತೆಗೆ ಆಟವಾಡಿದ ಗಂಭೀರ ವಿಚಾರವಾಗಿದೆ. ಅದನ್ನು ಸಕ್ರಮವಾಗಿ ಹಾಗೂ ಜವಾಬ್ದಾರಿಯುತವಾಗಿ, ನಿಭಾಯಿಸುವಲ್ಲಿ ವಿಫಲವಾದ ಸಂಬಂಧಿಸಿದ ಮಂತ್ರಿಗಳ ರಾಜೀನಾಮೆಯನ್ನು ತಕ್ಷಣ ನೈತಿಕ ನೆಲೆಯಲ್ಲಿ ಪಡೆಯಲು ಕ್ರಮ ವಹಿಸುವಂತೆ ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.

ಅದೇ ರೀತಿ, ಈ ಸಂಬಂಧ ವ್ಯವಹರಿಸಿರುವ ಉನ್ನತ ಅಧಿಕಾರಿಗಳನ್ನು ತಕ್ಷಣವೆ ಅಮಾನತಿನಲ್ಲಿಡಬೇಕು ಹಾಗೂ ಭ್ರಷ್ಟಾಚಾರದ ಪ್ರಕರಣವನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ವಾಸ್ತವವೇನೆಂಬುದನ್ನು ಬಹಿರಂಗ ಪಡಿಸಬೇಕು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಹಬೀಬುಲ್ಲಾ ಖಾನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News