ಮೈಸೂರು: ಅಯೋಧ್ಯೆಯನ್ನು ಬುದ್ಧಭೂಮಿ ಎಂದು ಘೋಷಿಸಲು ಒತ್ತಾಯಿಸಿ ದಸಂಸ ಧರಣಿ

Update: 2020-05-30 18:01 GMT

ಬುದ್ಧನ ಚಿಂತನೆ, ಮಾರ್ಗದರ್ಶನ ಇಡೀ ವಿಶ್ವಕ್ಕೆ ಅವಶ್ಯಕವಾಗಿದೆ: ಚೋರನಹಳ್ಳಿ ಶಿವಣ್ಣ

ಮೈಸೂರು,ಮೇ.30: ಅಯೋದ್ಯೆಯಲ್ಲಿ ರಾಮಮಂದಿರ ಕಟ್ಟಲು ತಳಪಾಯ ಅಗೆಯಲು ಪ್ರಾರಂಭ ಮಾಡುತ್ತಿದ್ದಂತೆ ಅಗಾಧ ಪ್ರಮಾಣದಲ್ಲಿ ಬುದ್ಧನ ಮೂರ್ತಿಗಳು, ದಮ್ಮ ಚಕ್ರದ ಶಿಲೆಗಳು, ಶಾಸನಗಳು ಮತ್ತಿತರ ಬೌದ್ಧ ಅವಶೇಷಗಳು ಭೂಮಿಯಿಂದ ಹೊರಬರುತ್ತಲೇ ಇವೆ. ಹಾಗಾಗಿ ಅಯೋಧ್ಯೆ ಭೂಮಿಯನ್ನು ಬುದ್ಧಭೂಮಿಯೆಂದು ಘೋಷಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು, ಅಯೋಧ್ಯೆ ಬುದ್ಧ ಭೂಮಿ ಎಂದು ಸಾಬೀತಾಗಿರುವುದರಿಂದ ಸದರಿ ಭೂಮಿಯಲ್ಲಿ ನಡೆಯುತ್ತಿರುವ ರಾಮಮಂದಿರದ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಯಾವುದೇ ದೇವರು, ಧರ್ಮ, ಧರ್ಮಸುಧಾರಕರು ಹೇಳಲಾರದಂತಹ ಅಪರಿಮಿತವಾದ ಮಾನವತೆಗೆ ಪೂರಕವಾದ ಪ್ರೀತಿ, ಕರುಣೆ, ಮಮತೆ, ಶೀಲ, ಶಾಂತಿ, ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯಗಳಿಗೆ ಭದ್ರ ಬುನಾದಿ ಹಾಕಿದ ಮಹಾ ಮಾನವತಾವಾದಿ ಬುದ್ಧನ ಚಿಂತನೆ, ಆಶಯ, ಮಾರ್ಗದರ್ಶನ ಹಿಂದೆಂದಿಗಿಂತಲೂ ಇಂದು ಇಡೀ ವಿಶ್ವಕ್ಕೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಬುದ್ಧ ಭೂಮಿಯ ನಾಡಾಗಿದ್ದ ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯು ಹಿಂದೆ ಸಾಕೇತ್ ಎಂಬ ಹೆಸರಿನಲ್ಲಿ ಪ್ರಚಲಿತಗೊಂಡಿತ್ತು. ರಾಜಕೀಯ ಕಾರಣಗಳಿಂದ ಅಯೋಧ್ಯೆಯು ರಾಮಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಎಂಬ ಉಯ್ಯುಲಿನೊಂದಿಗೆ ಕೆಲವು ಸಂಘನೆಗಳು ದೇಶಾದ್ಯಂತ ಕೋಲಾಹಲವನ್ನು ಸೃಷ್ಟಿಸಿ ಈ ಜಾಗದ ವಿಷಯದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಸದರಿ ಭೂಮಿಯ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಮುಂದಾದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಶಿಯಾ ವಕ್ಫ್ ಬೋರ್ಡ್‍ರವರ ಅಫಿಡವಿಟ್ ಆಧಾರದ ಮೇಲೆ ಸದರಿ ಜಾಗದಲ್ಲಿ ರಾಮಮಂದಿರ ನಿರ್ಮಿಸಲು 2019ರಲ್ಲಿ ಅನುವು ಮಾಡಿಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

1862-63 ರಲ್ಲಿ ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಂ ಎಂಬುವವರು ಮೊಟ್ಟಮೊದಲ ಬಾರಿಗೆ ಸಂಶೋಧನೆ ನಡೆಸಿ ಅಯೋಧ್ಯೆಯು ಹಿಂದೆ ಸಾಕೇತ್ ಪಟ್ಟಣವಾಗಿತ್ತು ಎಂಬುದನ್ನು ಬೆಳಕಿಗೆ ತಂದು ಬೌದ್ಧರ ತಾಣವಾಗಿತ್ತೆಂಬುದರ ಬಗ್ಗೆ ಜಗತ್ತಿನ ಕಣ್ತೆರೆಸಿದರು. ಸ್ವಾತಂತ್ರ್ಯಾ ನಂತರವೂ ಸಹ 1969-70ರಲ್ಲಿ ಪ್ರೊ.ಆವದ್ ಕಿಶೋರ್ ನಾರಾಯಣ್ ಎಂಬುವವರು ಅಯೋಧ್ಯೆಯಲ್ಲಿ ಮೊಟ್ಟ ಮೊದಲಿಗೆ ಉತ್ಖನನ ನಡೆಸಿ ಸಾಕೇತ್ ಬೌದ್ಧ ತಾಣವಾಗಿತ್ತೆಂಬುದನ್ನು ದಾಖಲಿಸಿದ್ದಾರೆ ಎಂದು ತಿಳಿಸಿದರು.

ಕಾಲ್ಪನಿಕ ಕಥೆಯಾದ ವಾಲ್ಮೀಕಿ ರಾಮಾಯಣದ ಆಯೋಧ್ಯೆ ಕಾಂಡ ಸ್ವರ್ಗ 109 ಶ್ಲೋಕ 34ರಲ್ಲಿ ಬುದ್ಧನ ಕುರಿತು ಪ್ರಸ್ತಾಪಿಸಿರುವುದನ್ನು ಗಮನಿಸಿದರೆ ರಾಮ ಬುದ್ಧರಿಗಿಂತ ಮೊದಲಿಗರಲ್ಲ ಎಂಬ ಸತ್ಯವನ್ನು ಕಾಣಬಹದು ಎಂದು ಹೇಳಿದರು.

ಅಯೋಧ್ಯೆ ಬುದ್ಧ ಭೂಮಿ ಎಂದು ಸಾಬೀತಾಗಿರುವುದರಿಂದ ಸದರಿ ಭೂಮಿಯಲ್ಲಿ ನಡೆಯುತ್ತಿರುವ ರಾಮಮಂದಿರದ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ರಾಮಜನ್ಮ ಭೂಮಿ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಕ್ರಮ ವಹಿಸಬೇಕು. ಸಂಶೋಧನೆ ಉತ್ಖನನ ವರದಿಗಳಿಂದ ಬೌದ್ಧರ ತಾಣವಾಗಿರುವ ಆಯೋಧ್ಯೆಯಲ್ಲಿ ಬುದ್ಧವಿಹಾರ ನಿರ್ಮಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರುಗಳಾದ ಕೆ.ವಿ.ದೇವೇಂದ್ರ, ಎಡೆದೊರೆ ಮಹದೇವಯ್ಯ, ಮೂಡಹಳ್ಳಿ ಮಹದೇವ್, ಅರಸಿನಕೆರೆ ಶಿವರಾಜು, ಕಿರಂಗೂರು ಸ್ವಾಮಿ, ಸಣ್ಣಯ್ಯ ಲಕ್ಕೂರು, ಕಲ್ಲಹಳ್ಳಿ ರಮೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News