ಬಿಜೆಪಿಯಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ್

Update: 2020-05-31 17:36 GMT

ಮೈಸೂರು,ಮೇ.31: ನಮ್ಮಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ, ಯಾರೂ ಕೂಡ ಲಕ್ಷ್ಮಣ ರೇಖೆ ದಾಟುವುದಿಲ್ಲ, ನಮ್ಮ ಸರ್ಕಾರದಲ್ಲಿ ಯಾವುದೇ ಕಿತ್ತಾಟವಿಲ್ಲ, ಸರ್ಕಾರ ಸುಭದ್ರವಾಗಿದ್ದು ಮೂರುವರೆ ವರ್ಷ ಆಡಳಿತ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮೈಸೂರಿನಲ್ಲಿ ರವಿವಾರ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಆಂತರಿಕ ಕಚ್ಚಾಟ ಏನು ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆಂತರಿಕ ಕಚ್ಚಾಟದಿಂದ ಯಾವ ಸರ್ಕಾರಕ್ಕೆ ತೊಂದರೆಯಾಗಿದೆ ಎಂಬುದೂ ಗೊತ್ತಿದೆ. ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ, ಸರ್ಕಾರ ಸುಭದ್ರವಾಗಿದೆ ಎಂದು ಸಮರ್ಥಿಸಿಕೊಂಡರು. 

ಬಿಜೆಪಿ ಶಾಸಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಅಪೇಕ್ಷೆ ಇರುತ್ತೆ. ಆ ರೀತಿಯ ಅಪೇಕ್ಷೆ ಇರುವುದು ತಪ್ಪಲ್ಲ, ಆದರೆ ಅದನ್ನ ಕೇಳುವ ರೀತಿ ಸರಿಯಾಗಿರಬೇಕು. ಪಕ್ಷದ ಹೈಕಮಾಂಡ್ ಇದನ್ನು ಗಮನಿಸಿದೆ ಎಂದು ಸೂಚ್ಯವಾಗಿ ಅಸಮಾಧಾನಿತರಿಗೆ ಎಚ್ಚರಿಕೆ ನೀಡಿದರು.

ಪಾದರಾಯನಪುರ ಕಾರ್ಪೋರೇಟರ್ ತಿಳುವಳಿಕೆ ಇಲ್ಲದೆ ಆ ರೀತಿ ನಡೆದುಕೊಂಡರು. ಈಗ ಅವರನ್ನು ಐಸೋಲೇಷನ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನ ಗುಣಲಕ್ಷಣ ಇಲ್ಲದ ಕಾರಣ ಇದನ್ನು ನಂಬಲು ಸಾಧ್ಯವಾಗಿರಲ್ಲ. ಇದನ್ನು ಅರ್ಥ ಮಾಡಿಸುವ ಕೆಲಸ ಮಾಡಲಾಗಿದೆ ಎಂದರು. ಜೀವನಕ್ಕಾಗಿ ಲಾಕ್‍ಡೌನ್ ಸಡಿಲ ಮಾಡಲಾಗಿದೆ. ವೈರಸ್ ಹೋಗಲ್ಲ. ನಮ್ಮ ಜೊತೆಯಲ್ಲೇ ಇರುತ್ತೆ. ಬೇರೆ ವೈರಸ್ ರೀತಿ ಇದು ಕೂಡಾ ಇರುತ್ತೆ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಜೀವನ ಮಾಡಲು ಜೀವನಾಂಶ ಬೇಕು ಎಂದು ತಿಳಿಸಿದರು.

ಇಡೀ ದೇಶಕ್ಕೆ ಬೇಕಾಗುವಷ್ಟು ಪಿಪಿಇ ಕಿಟ್ ಬೆಂಗಳೂರಿನಲ್ಲಿ ತಯಾರಾಗುತ್ತಿದೆ. ಲಾಕ್ ಡೌನ್‍ಗಿಂತ ಮುಂಚಿನ ಪರಿಸ್ಥಿತಿ ಸರಿ ಇರಲಿಲ್ಲ. ಆದರೆ ಇದೀಗ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ಇಡೀ ದೇಶಕ್ಕೆ ಬೇಕಾಗುವ ಪಿಪಿಇ ಕಿಟ್ ಬೆಂಗಳೂರಿನಲ್ಲಿ ತಯಾರಾಗುತ್ತಿದೆ. ಕರ್ನಾಟಕ ಇತರ ರಾಜ್ಯಕ್ಕೆ ಮಾದರಿಯಾಗಿದೆ. ಟೆಸ್ಟಿಂಗ್ ಲ್ಯಾಬ್‍ಗಳ ಸಂಖ್ಯೆ ಹೆಚ್ಚಾಗಿದೆ. ಐಸಿಯು ಹಾಗೂ ವೆಂಟಿಲೇಟರ್ ಗಳ ಸಂಖ್ಯೆ ಕೂಡ ಹೆಚ್ಚಿದೆ. ಈ ಕಾರಣದಿಂದ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News