ಖ್ಯಾತ ಸಂಗೀತ ಸಂಯೋಜಕ ವಾಜಿದ್ ಖಾನ್ ನಿಧನ

Update: 2020-06-01 03:58 GMT

ಮುಂಬೈ : ಖ್ಯಾತ ಸಂಗೀತ ಸಂಯೋಜಕ ವಾಜಿದ್ ಖಾನ್ ತಮ್ಮ 42ನೇ ವಯಸ್ಸಿನಲ್ಲಿ ನಿಧನರಾದರು. ಗಾಯಕ ಸೋನು ನಿಗಮ್ ಇನ್‌ಸ್ಟಾಗ್ರಾಂನಲ್ಲಿ ಇದನ್ನು ಪ್ರಕಟಿಸಿದ್ದು, ನನ್ನ ಸಹೋದರ ವಾಜಿದ್ ನಮ್ಮನ್ನಗಲಿದ್ದಾರೆ ಎಂದು ಹೇಳಿದ್ದಾರೆ.

ಸಾಜಿದ್-ವಾಜಿದ್ ಜೋಡಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿತ್ತು. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಕಿಡ್ನಿ ಸಮಸ್ಯೆಗಾಗಿ ಇತ್ತೀಚೆಗೆ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಕಿಡ್ನಿ ಸೋಂಕು ತಗುಲಿತ್ತು. ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದರು. ಕಿಡ್ನಿ ಸೋಂಕು ಆರಂಭದಲ್ಲಿ ಕಾಣಿಸಿಕೊಂಡು ಬಳಿಕ ತೀವ್ರವಾಯಿತು ಎಂದು ಸಂಗೀತ ಸಂಯೋಜಕ ಸಲೀಂ ಮರ್ಚಂಟ್ ವಿವರಿಸಿದ್ದಾರೆ.

ವಾಜಿದ್‌ಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿತ್ತು ಎಂದು ಸೋನು ನಿಗಮ್ ದೃಢಪಡಿಸಿದ್ದಾಗಿ ಮನೋರಂಜನಾ ಪತ್ರಕರ್ತ ಫರಿದೂನ್ ಶಹರಿಯಾರ್ ಹೇಳಿದ್ದಾರೆ. 

ಬೇಸರದ ಸುದ್ದಿ: ಖ್ಯಾತ ಗಾಯಕ ಸೋನು ನಿಗಮ್ ಈಗಷ್ಟೇ ಸಂಗೀತ ಸಂಯೋಜಕ ವಾಜಿದ್ ಖಾನ್ ಅವರ ನಿಧನದ ಸುದ್ದಿ ದೃಢಪಡಿಸಿದ್ದಾರೆ. ಸಾಜಿದ್-ವಾಜಿದ್ ಜೋಡಿಯ ಪೈಕಿ ವಾಜಿದ್ ನಿಧನರಾಗಿದ್ದಾರೆ. ಅವರಿಗೆ ಕೋವಿಡ್-19 ಸೋಂಕು ಇತ್ತು ಎಂದು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಸಾಜಿದ್- ವಾಜಿದ್ ಜೋಡಿ ದಬಾಂಗ್ ಫ್ರಾಂಚೈಸ್, ಚೋರಿ ಚೋರಿ, ಹೆಲೊ ಬ್ರದರ್, ವಾಂಟೆಡ್ ಮತ್ತು ಮುಜ್ಸೆ ಶಾದಿ ಕರೋಗಿ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.

ವಾಜಿದ್ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಭಯಾನಕ ಸುದ್ದಿ. ನನ್ನ ನೆನಪಿನ ಬುತ್ತಿಯಲ್ಲಿ ಸದಾ ಇರುವುದು ವಾಜಿದ್ ಅವರ ನಗು. ಸದಾ ಹಸನ್ಮುಖಿ. ಇಷ್ಟು ಬೇಗ ಹೋಗಿಬಿಟ್ಟರು.. ಎಂದು ಪ್ರಿಯಾಂಕಾ ಛೋಪ್ರಾ ಟ್ವೀಟ್ ಮಾಡಿದ್ದಾರೆ. ಸಲೀಂ ಮರ್ಚಂಟ್, ಕೇಂದ್ರ ಸಚಿವ ಬಬೂಲ್ ಸುಪ್ರಿಯೊ, ಗಾಯಕಿ ತುಳಸಿ ಕುಮಾರ್ ಮತ್ತಿತತರು ಕಂಬನಿ ಮಿಡಿದಿದ್ದಾರೆ.

ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಲ್ಲದೇ ಹುದ್ ಹುದ್ ದಬಾಂಗ್, ಜ್ವಾಲಾ ಮತ್ತು ಫೆವಿಕೋಲ್ ಸೇ ಮತ್ತಿತರ ಹಾಡುಗಳಿಗೆ ಕಂಠದಾನವನ್ನೂ ಮಾಡಿದ್ದರು. ವಾಜಿದ್ ಅವರು ತಮ್ಮ ಸಹೋದರ ಸಾಜಿದ್ ಜತೆ ಸರಿ ಗ ಮ ಪ..2012 ಮತ್ತು ಸರಿ ಗಮ ಪ ಸಿಂಗಿಂಗ್ ಸೂಪರ್ ‌ಸ್ಟಾರ್‌ನಂಥ ರಿಯಾಲಿಟಿ ಷೋಗಳಲ್ಲಿ ಮಾರ್ಗದರ್ಶಕರಾಗಿಯೂ ಹೆಸರು ಗಳಿಸಿದ್ದರು. ಐಪಿಎಲ್ 4 ಧ್ಯೇಯ ಗೀತೆ ಧೂಮ್ ಧೂಮ್ ಧೂಮ್ ದಡ್ಕಾಗೆ ಸಂಗೀತ ಸಂಯೋಜನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News