ಚಿಕ್ಕಮಗಳೂರು: ಟೈರ್ ಅಂಗಡಿಯಲ್ಲಿ ಅಗ್ನಿ ಅವಘಡ; ಕೋಟ್ಯಂತರ ರೂ. ನಷ್ಟ

Update: 2020-06-01 13:18 GMT

ಚಿಕ್ಕಮಗಳೂರು, ಜೂ.1: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಟೈರ್ ಮಾರಾಟದ ಅಂಗಡಿ ಮಳಿಗೆ ಸೇರಿ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ನಗರದಲ್ಲಿ ವರದಿಯಾಗಿದೆ.

ನಗರದ ಐಜಿ ರಸ್ತೆಯ ಎನ್‍ಎಂಸಿ ವೃತ್ತದಲ್ಲಿರುವ ಶಾಜಿ ನಾಯರ್ ಎಂಬವರಿಗೆ ಸೇರಿದ ಮಲ್ನಾಡ್ ಟೈರ್ಸ್ ಹೆಸರಿನ ದೊಡ್ಡ ಅಂಗಡಿಯಲ್ಲಿ ಸೋಮವಾರ ಬೆಳಗಿನ ಜಾವ ಸುಮಾರು 3ರಿಂದ 4ರ ಸಮಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಶಾಜಿ ನಾಯರ್ ಅವರ ಮೂರು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅಂಗಡಿಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಟೈರ್ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದವರಿಗೆ ತಿಳಿದಿರಲಿಲ್ಲ. ಬೆಂಕಿ ಟೈರ್ ಗಳಿಗೆ ತಗಲಿದ ಪರಿಣಾಮ ದಟ್ಟ ಹೊಗೆ ಭಾರೀ ಪ್ರಮಾಣದಲ್ಲಿ ರಸ್ತೆಯುದ್ದಕ್ಕೂ ಹರಡಿದೆ. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಆದರೆ ಅಗ್ನಿಶಾಮಕದಳದ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗದ ಪರಿಣಾಮ ಕಡೂರು, ಬೇಲೂರು, ಮೂಡಿಗೆರೆಯ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿದರು. ಬಳಿಕ ಅಂಗಡಿ ಹಿಂಬದಿಯ ಗೋಡೆಯನ್ನು ಜೆಸಿಬಿ ಮೂಲಕ ಒಡೆದು ಬೆಂಕಿ ನಂದಿಸಲಾಯಿತು. ಬೆಳಗ್ಗೆ 5ಕ್ಕೆ ಆರಂಭವಾದ ಬೆಂಕಿ ನಂದಿಸುವ ಕಾರ್ಯಾಚರಣೆ ಬೆಳಗ್ಗೆ 8ರವರೆಗೂ ಮುಂದುವರಿಯಿತು. ಸಿಬ್ಬಂದಿ ಶ್ರಮದಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡುವುದು ತಪ್ಪಿದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.

ಬೆಂಕಿ ಅವಘಡದಲ್ಲಿ ಶಾಜಿ ಅವರ ಟೈರ್ ಅಂಗಡಿ ಮಳಿಗೆ ಹಾಗೂ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಟೈರ್ ಹಾಗೂ ಕಟ್ಟಡ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಿವಿಧ ವಾಹನಗಳ ಟೈರ್, ಟ್ಯೂಬ್‍ಗಳು ದಾಸ್ತಾನಿದ್ದ ಕಾರಣ ಬೆಂಕಿ ಸುಲಭವಾಗಿ ಹರಡಿದೆ. ಪಕ್ಕದಲ್ಲಿ ಬಟ್ಟೆ ಅಂಗಡಿಯ ಪೆಂಡಾಲ್, ಎಡಭಾಗದಲ್ಲಿ ಅನ್ನಪೂರ್ಣ ಏಜೆನ್ಸಿ ಅಂಗಡಿಯಿದ್ದು, ಅದೃಷ್ಟವಶಾತ್ ಅಲ್ಲಿಗೆ ಬೆಂಕಿ ಹರಡಿಲ್ಲ. ಕಟ್ಟಡದ 3ನೇ ಮಹಡಿಯಲ್ಲಿದ್ದ ಇನ್ಸೂರೆನ್ಸ್ ಕಂಪನಿ ಕಚೇರಿವರೆಗೂ ಬೆಂಕಿ ಹಬ್ಬಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ. 

ಘಟನೆ ಸಂಬಂಧ ನಗರ ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News