ಸಿದ್ದರಾಮಯ್ಯ ಜನನಾಯಕ ಎಂದು ಜನರೇ ಒಪ್ಪಿಕೊಂಡಿದ್ದಾರೆ. ಆದರೆ....: ಮಾಜಿ ಸಿಎಂ ಬಗ್ಗೆ ಸಿ.ಟಿ. ರವಿ ಹೇಳಿದ್ದೇನು ?

Update: 2020-06-01 13:30 GMT

ಚಿಕ್ಕಮಗಳೂರು, ಜೂ.1: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರಕಾರ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಸರಕಾರವನ್ನು ಹೊಗಳಿರುವ ಉದಾಹರಣೆಯೇ ಇಲ್ಲ. ಅವರು ಬಿಜೆಪಿಯನ್ನು ಹೊಗಳಬೇಕಾದರೆ ಬಿಜೆಪಿಗೆ ಸೇರಬೇಕಷ್ಟೆ, ಕಾಂಗ್ರೆಸ್‍ನಲ್ಲಿದ್ದು ಬಿಜೆಪಿ ಹೊಗಳಿದರೆ ಅವರ ಅಧಿಕಾರಕ್ಕೆ ಸಂಚಕಾರ ಬರಲಿದೆ ಎಂದು ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಶೀತಲ ಸಮರ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು. ಇವರ ನಡುವಿನ ಭಿನ್ನಾಭಿಪ್ರಾಯಗಳೇ ರಾಜ್ಯದಲ್ಲಿ ಕಾಂಗ್ರೆಸ್ ಮೂಲೆಗುಂಪಾಗಲು ಸಾಕು. ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಬರಬಹುದು. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದ ದಿನ ಖಂಡಿತ ನಮ್ಮ ಸಾಧನೆಗಳನ್ನು ಹೊಗಳುತ್ತಾರೆ. ಕಾಂಗ್ರೆಸ್‍ನಲ್ಲಿದ್ದ ಮಾಧವರಾವ್ ಮಗ ಸಿಂಧ್ಯಾ ಬಿಜೆಪಿ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ್ದಾರೆ. ಹಿಂದೆ ಬಿಜೆಪಿಯನ್ನು ಟೀಕೆ ಮಾಡಿದವರೆಲ್ಲರೂ ಇಂದು ಬಿಜೆಪಿ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯ ಕೂಡ ಈಗ ಬಿಜೆಪಿಯನ್ನು ಟೀಕಿಸುತ್ತಾರೆ. ಮುಂದೆ ಅವರೂ ಬಿಜೆಪಿ ಸೇರಿದರೂ ಆಶ್ಚರ್ಯಪಡಬೇಕಿಲ್ಲ ಎಂದು ರವಿ ವ್ಯಂಗ್ಯವಾಡಿದರು.

ಯಡಿಯೂರಪ್ಪ, ದೇವೇಗೌಡ, ಸಿದ್ದರಾಮಯ್ಯರಂತಹ ಕೆಲವೇ ಮಂದಿ ರಾಜ್ಯದಲ್ಲಿ ಜನನಾಯಕರೆನಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಜನನಾಯಕ ಎಂದು ಜನರೇ ಒಪ್ಪಿಕೊಂಡಿದ್ದಾರೆ. ಆದರೆ ಜನನಾಯಕರು ಇರಬೇಕಾದ ಪಕ್ಷ ಬಿಜೆಪಿಯಾಗಿದೆ ಎಂದು ಸಿ.ಟಿ.ರವಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸೇರಲು ಆಹ್ವಾನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News