ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.19ಕ್ಕೆ ಮತದಾನ

Update: 2020-06-01 16:16 GMT

ಬೆಂಗಳೂರು, ಜೂ.1: ಇದೇ ತಿಂಗಳ 25 ರಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಲ್ವರ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದ್ದು, ತೆರವಾಗಲಿರುವ ಆ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ಕ್ಕೆ ಮತದಾನ ದಿನಾಂಕ ನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 9 ಕೊನೆಯ ದಿನವಾಗಿದೆ. ಜೂನ್ 10ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂನ್ 12ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಜೂನ್ 19ರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಶಾಸಕರು ಮತದಾನ ಮಾಡಲಿದ್ದಾರೆ. ಅದೇ ದಿನ ಸಂಜೆ 5ಗಂಟೆಗೆ ಮತ ಏಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಿದ್ದ ಡಿ.ಕುಪೇಂದ್ರ ರೆಡ್ಡಿ, ಪ್ರಭಾಕರ್ ಕೋರೆ, ಎಂ.ವಿ.ರಾಜೀವ್ ಗೌಡ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಅವಧಿ ಮುಕ್ತಾಯವಾಗಲಿದೆ. ಜೆಡಿಎಸ್‍ನ ಕುಪೇಂದ್ರ ರೆಡ್ಡಿ, ಬಿಜೆಪಿಯ ಪ್ರಭಾಕರ್ ಕೋರೆ ಮತ್ತು ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್ ಅವರು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಲು ವರಿಷ್ಠರ ಮಟ್ಟದಲ್ಲಿ ಲಾಭಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ತೆರಳಲು ಇಚ್ಛಿಸಿದ್ದಾರೆ. 225 ಮಂದಿ ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಮಂದಿ ಆಯ್ಕೆಯಾಗಬೇಕಿದ್ದು, ಆಡಳಿತಾರೂಢ ಬಿಜೆಪಿ(116 ಶಾಸಕರ ಸಂಖ್ಯೆ)ಯ ಇಬ್ಬರು, ಕಾಂಗ್ರೆಸ್ (68)ಪಕ್ಷದ ಓರ್ವ ಸದಸ್ಯ ಅನಾಯಾಸವಾಗಿ ಆಯ್ಕೆಯಾಗಬಹುದು. ಮತ್ತೊಬ್ಬ ಸದಸ್ಯನ ಆಯ್ಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್(34) ಮೈತ್ರಿ ಅನಿವಾರ್ಯವಾಗಿದೆ. ರಾಜ್ಯಸಭೆಯ ಓರ್ವ ಸದಸ್ಯನ ಆಯ್ಕೆಗೆ 45 ಮಂದಿ ಶಾಸಕರು ಮತದಾನ ಮಾಡಬೇಕಿದ್ದು, ಪಕ್ಷದ ವರಿಷ್ಟರು ಯಾರಿಗೆ ಮಣೆ ಹಾಕಲಿದ್ದಾರೆಂಬುದು ಕುತೂಹಲ ಮೂಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News