ಗದಗ: ಪತಿಯ ಅಂತ್ಯಸಂಸ್ಕಾರ ಮಾಡಲು ತಾಳಿ ಅಡವಿಟ್ಟ ಪತ್ನಿ

Update: 2020-06-01 16:33 GMT

ಗದಗ, ಜೂ.2: ಹೃದಯಾಘಾತದಿಂದ ಸಾವನ್ನಪ್ಪಿದ 108 ಆಂಬ್ಯುಲೆನ್ಸ್ ಚಾಲಕನ ಅಂತ್ಯಸಂಸ್ಕಾರ ಮಾಡಲು ಪರದಾಡಿದ ಕುಟುಂಬ ಕೊನೆಗೆ ಚಾಲಕನ ಪತ್ನಿಯ ತಾಳಿಯನ್ನು ಅಡವಿಟ್ಟು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ ಎನ್ನಲಾಗಿದೆ.

ಗದಗ ಜಿಲ್ಲೆ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ 108 ಆಂಬ್ಯುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಹಡಗಲಿ ಮೇ 27ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಡತನದ ಹಿನ್ನೆಲೆಯಿರುವ ಕುಟುಂಬಕ್ಕೆ ಮೃತನ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರ್ಣಗೊಳಿಸುವುದಕ್ಕೆ ಹಣವಿಲ್ಲದೆ ಪರದಾಡುವಂತಾಗಿತ್ತು. ಕೊನೆಗೆ ಅನ್ಯ ಮಾರ್ಗವಿಲ್ಲದೇ ತಾಳಿ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊರೋನ ಸೋಂಕಿನ ವಿರುದ್ಧ ಹೋರಾಟ ಮಾಡಿ ಜನರನ್ನು ರಕ್ಷಿಸುವ ವಾರಿಯರ್ಸ್ ಗಳ ಜೀವ ಹಾಗೂ ಕೆಲಸಕ್ಕೆ ಬೆಲೆ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬರುತ್ತಿವೆ. 

ಈ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗಗೊಳ್ಳುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮೃತ ಪತ್ನಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಅಲ್ಲದೆ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಕೊರೋನ ವಿಮೆ ವ್ಯಾಪ್ತಿಯಲ್ಲಿ ಪರಿಹಾರ ನೀಡಲು ಪ್ರಯತ್ನ ಮಾಡಲಾಗುವುದು. ಕೊರೋನ ವಿಮೆ ವ್ಯಾಪ್ತಿಯಲ್ಲಿ ಬರದೇ ಇದ್ದರೆ ಸಿಎಂ ಫಂಡ್‍ನಲ್ಲಿ ಪರಿಹಾರ ವ್ಯವಸ್ಥೆ ಮಾಡುತ್ತೇವೆ. ಕೊರೋನ ವಾರಿಯರ್ಸ್ ಭಯ ಪಡುವ ಅವಶ್ಯಕತೆ ಇಲ್ಲ. ಸರಕಾರ ನಿಮ್ಮ ಜೊತೆ ಇರುತ್ತದೆ ಭಯಪಡಬೇಡಿ ಎಂದು ವಾರಿಯರ್ಸ್ ಗೆ ಸಚಿವ ಸಿ.ಸಿ.ಪಾಟೀಲ್ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News