ಕೊರೋನದ ಮರೆಯಲ್ಲಿ ಮೆರೆಯುತ್ತಿರುವ ಜಾತಿ, ವರ್ಗದ ಕ್ರೌರ್ಯ

Update: 2020-06-02 05:19 GMT

ದೇಶ ವಿಭಜನೆಯ ಕಾಲದಲ್ಲಿ ಹೆಣಗಳನ್ನು ತುಂಬಿಕೊಂಡು ಬಂದ ರೈಲು ಬೋಗಿಗಳ ಬೆಚ್ಚಿ ಬೀಳಿಸುವ ಕತೆಗಳನ್ನು ನಾವು ಕೇಳಿದ್ದೇವೆ. ಹಿಟ್ಲರ್‌ನ ಕಾಲದಲ್ಲಿ ರೈಲುಬೋಗಿಗಳಲ್ಲಿ ಉಸಿರುಗಟ್ಟಿ ಸತ್ತ ಯಹೂದಿಗಳ ಕುರಿತ ಉಸಿರುಗಟ್ಟುವ ಘಟನೆಗಳನ್ನು ಓದಿದ್ದೇವೆ. ಕೊರೋನ ಕಾಲದಲ್ಲಿ ಆ ಕತೆಗಳು ಭಾರತದಲ್ಲಿ ಮರುಕಳಿಸುತ್ತಿವೆ. ಒಂದು ವರದಿಯ ಪ್ರಕಾರ ಭಾರತದಲ್ಲಿ ಎರಡು ತಿಂಗಳ ಲಾಕ್‌ಡೌನ್‌ನಿಂದ ಉಸಿರುಗಟ್ಟಿ ಸತ್ತಿರುವ ವಲಸೆ ಕಾರ್ಮಿಕರ ಅಧಿಕೃತ ಸಂಖ್ಯೆ 251. ಇವರಲ್ಲಿ 81 ಮಂದಿ ಸತ್ತಿರುವುದು ವಲಸಿಗರನ್ನು ತಮ್ಮ ಊರಿಗೆ ತಲುಪಿಸಲು ಸರಕಾರವೇ ಆಯೋಜಿಸಿದ ‘ಶ್ರಮಿಕ್ ರೈಲು’ ಪ್ರಯಾಣದ ಸಂದರ್ಭದಲ್ಲಿ. ಉಳಿದ 170 ಮಂದಿ ಬೇರೆ ಬೇರೆ ವಾಹನಗಳಲ್ಲಿ ಊರಿಗೆ ಮರಳುವ ಸಂದರ್ಭದಲ್ಲಿ ದುರಂತಗಳು ಸಂಭವಿಸಿ ಮೃತಪಟ್ಟಿದ್ದಾರೆ. ಇತ್ತೀಚೆಗೆ ಇದೇ ಶ್ರಮಿಕ್ ರೈಲಿನ ಶೌಚಾಲಯದಲ್ಲಿ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾದವು. ಅವರು ಅಲ್ಲಿ ಸತ್ತು ಅದಾಗಲೇ ಎರಡು ದಿನಗಳಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ದುರಂತವನ್ನು ದೇಶ ವಿಭಜನೆಯ ಕಾಲದಲ್ಲಿ ಸಂಭವಿಸಿದ ‘ಮಹಾ ವಲಸೆ’ಯ ಸಂದರ್ಭದ ದುರಂತಕ್ಕೆ ಹೋಲಿಸುವುದು ಎಷ್ಟು ಸರಿ? ಎನ್ನುವಂತಹ ಪ್ರಶ್ನೆ ಎದುರಾಗುವುದು ಸಹಜ. ದೇಶವಿಭಜನೆಯ ಕಾಲದ ದುರಂತಗಳಿಗೆ ಬ್ರಿಟಿಷರು ಎಸಗಿದ ವಿದ್ರೋಹಗಳು ಕಾರಣ.

ಜೊತೆಗೆ ದೇಶದಲ್ಲಿ ಇನ್ನೂ ಪ್ರಜಾಸತ್ತಾತ್ಮಕವಾದ ಸರಕಾರ ಗಟ್ಟಿಯಾಗಿ ಬೇರೂರಿರಲಿಲ್ಲ. ‘ತಾವು ಯಾವ ದೇಶಕ್ಕೆ ಸೇರಿದವರು’ ಎನ್ನುವ ಗೊಂದಲಗಳಲ್ಲೇ ವಲಸಿಗರು ತಮ್ಮ ಪ್ರಾಣವನ್ನು ಅರ್ಪಿಸಿದರು. ಆದರೆ ಸದ್ಯಕ್ಕೆ ‘ಲಾಕ್‌ಡೌನ್’ ಹೆಸರಿನಲ್ಲಿ ಬಲಿಯಾದ ಕಾರ್ಮಿಕರು ಯಾವುದೋ ದೇಶದಿಂದ ಭಾರತಕ್ಕೆ ಬಂದವರಲ್ಲ. ತಮ್ಮದೇ ನೆಲದೊಳಗೆ ‘ಅನ್ಯ’ರಾದ ಇವರು ಅತ್ಯಂತ ಹೃದಯವಿದ್ರಾವಕ ಅಂತ್ಯವನ್ನು ಕಂಡರು. ಕೆಲವರು ಹಳಿಗಳಲ್ಲಿ ರೈಲು ಹರಿದು ಮೃತಪಟ್ಟರು. ಹಲವರು ಅಪಘಾತಗಳಿಂದ ಸತ್ತರು. ಇನ್ನುಳಿದವರು ಪ್ರಯಾಣದ ಹಾದಿಯಲ್ಲಿ ಹಸಿವಿನಿಂದಲೇ ಮೃತಪಟ್ಟರು. ಸುಮಾರು ಎರಡು ತಿಂಗಳ ಕಾಲ ಈ ಕಾರ್ಮಿಕರು ವಿವಿಧ ನಗರಗಳಲ್ಲಿ ತಮ್ಮದೇ ಸರಕಾರದಿಂದ ಅನ್ನಾಹಾರವಿಲ್ಲದೆ ದಿಗ್ಬಂಧನಕ್ಕೊಳಗಾದರು. ‘ಒಂದೋ ನಮಗೆ ಊಟ, ವಸತಿಯ ವ್ಯವಸ್ಥೆ ಮಾಡಿ, ಇಲ್ಲವಾದರೆ ಊರಿಗೆ ತೆರಳಲು ಅವಕಾಶ ನೀಡಿ’ ಎಂದು ಅವರು ಸುಮಾರು ಎರಡು ತಿಂಗಳು ಸರಕಾರದ ಬಳಿ ಗೋಗರೆದಿದ್ದಾರೆ. ಪೊಲೀಸರ ಲಾಠಿಗಳನ್ನು ಎದುರಿಸಿದ್ದಾರೆ. ದಿಲ್ಲಿ, ಮುಂಬೈ, ಸೂರತ್ ಮೊದಲಾದ ನಗರಗಳಲ್ಲಿ ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದು ನೂರಾರು ಕಾರ್ಮಿಕರು ಬಂಧನಕ್ಕೊಳಗಾಗಿದ್ದಾರೆ. ಕೊನೆಗೆ, ಸರಕಾರದ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡು ತಮ್ಮ ಊರೆಡೆಗೆ ಪಾದಯಾತ್ರೆ ನಡೆಸತೊಡಗಿದರು.

ಸ್ವಾತಂತ್ರ ಪೂರ್ವದ ಗಾಂಧಿ ನೇತೃತ್ವದ ದಂಡಿಯಾತ್ರೆಯನ್ನು ಅಣಕಿಸುವಂತಿತ್ತು ವಲಸೆ ಕಾರ್ಮಿಕರ ಈ ದಂಡಿಯಾತ್ರೆ. ಯಾವುದೋ ಅನ್ಯಗ್ರಹದ ಜೀವಿಗಳಂತೆ, ಪೊಲೀಸರಿಗೆ, ಸರಕಾರಕ್ಕೆ ಹೆದರುತ್ತಾ ಹಸಿವು, ಅನಾರೋಗ್ಯಗಳ ಜೊತೆಗೆ ತಮ್ಮ ಊರನ್ನು ಸೇರುವ ತವಕದಲ್ಲಿ ಹಲವು ಕಾರ್ಮಿಕರು ಪ್ರಾಣ ತೆತ್ತರು. ಕಾರ್ಮಿಕರನ್ನು ಸಂಪೂರ್ಣವಾಗಿ ಮರೆತು ಸರಕಾರ ಘೋಷಿಸಿದ ಲಾಕ್‌ಡೌನ್, ಈ ದೇಶದಲ್ಲಿದ್ದೂ ಈ ದೇಶದವರಲ್ಲದ ಲಕ್ಷಾಂತರ ಜನರನ್ನು ಬೆಳಕಿಗೆ ತಂದಿತು. ಬಹುಶ ಕೇಂದ್ರ ಸರಕಾರ ‘ಎನ್‌ಆರ್‌ಸಿ’ ಹೆಸರಿನಲ್ಲಿ ‘ಡಿಟೆನ್‌ಶನ್ ಸೆಂಟರ್’ನಲ್ಲಿ ಇಡಲು ಬಯಸಿದ್ದೂ ಈ ಜನರನ್ನೇ ಇರಬೇಕು. ನಾಳೆ, ಹುಟ್ಟಿದ ದಾಖಲೆಗಳನ್ನು ಸಾಬೀತು ಪಡಿಸಲಾಗದೆ ಯಾವ ದೇಶಕ್ಕೂ ಸಲ್ಲದೆ ತಮ್ಮದೇ ನೆಲದಲ್ಲಿ ಅನ್ಯರಾಗುವವರ ಸ್ಥಿತಿ ಹೇಗಿರುತ್ತದೆ ಎನ್ನುವುದರ ಪೂರ್ವ ಪ್ರದರ್ಶನವಾಗಿದೆ ‘ಲಾಕ್‌ಡೌನ್’. ‘ಊರಿಗೆ ತೆರಳುವ ಕಾರ್ಮಿಕರಿಂದ ಪ್ರಯಾಣ ದರ ಸ್ವೀಕರಿಸದಿರಿ, ಅವರಿಗೆ ಅನ್ನಾಹಾರವನ್ನು ಒದಗಿಸಿರಿ’ ಎಂದು ಸುಪ್ರೀಂಕೋರ್ಟ್ ಸರಕಾರಕ್ಕೆ ನಿರ್ದೇಶಿಸುವ ಹೊತ್ತಿಗೆ, ವಲಸೆ ಕಾರ್ಮಿಕರಿಂದ ಹಲವು ರಾಜ್ಯ ಸರಕಾರಗಳು ಅದಾಗಲೇ ಬಸ್ ಮತ್ತು ರೈಲು ಪ್ರಯಾಣದ ಹಣವನ್ನು ಕಿತ್ತುಕೊಂಡಿದ್ದವು. ನೂರಾರು ಕಾರ್ಮಿಕರು ಅನ್ನಾಹಾರವಿಲ್ಲದೆ ತಮ್ಮ ತಮ್ಮ ಊರನ್ನು ತಲುಪಿ ಆಗಿತ್ತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಒಂದು ಸರಕಾರ, ತನ್ನವರೇ ಆಗಿರುವ ವಲಸೆ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ‘ನ್ಯಾಯಾಲಯ ಆದೇಶ’ ನೀಡುವವರೆಗೆ ಕಾಯುವ ಅಗತ್ಯವಿದೆಯೇ? ಸರಕಾರದ ಈ ನಿಲುವು ವಲಸೆ ಕಾರ್ಮಿಕರನ್ನು ಸದ್ಯದ ಭಾರತದಿಂದ ಹೊರಗಿಟ್ಟಂತಾಗಿದೆ.

 ಸುಪ್ರೀಂಕೋರ್ಟ್‌ನ ಆದೇಶದೊಂದಿಗೆ ವಲಸೆ ಕಾರ್ಮಿಕರ ಸಮಸ್ಯೆ ಪರಿಹಾರವಾಯಿತು ಎಂದು ನಿಟ್ಟುಸಿರು ಬಿಡುವಂತಿಲ್ಲ. ಇಲ್ಲಿಂದಲೇ ಅವರ ನಿಜವಾದ ಸಮಸ್ಯೆಗಳು ತೆರೆದುಕೊಂಡಿವೆ. ನಿರ್ಮಾನುಷವಾಗಿರುವ ನಗರಗಳಿಂದ ಪಾರಾಗಿ ತಮ್ಮ ತಮ್ಮ ಊರು ಸೇರಿದರೆ, ಬೇಡಿ ತಿಂದೇವು ಎನ್ನುವುದು ವಲಸೆ ಕಾರ್ಮಿಕರ ಇಂಗಿತವಾಗಿತ್ತು. ಆದರೆ ಹುಟ್ಟಿದ ಊರು ಕೂಡ ಅವರನ್ನು ಹಾರ್ದಿಕವಾಗಿ ಸ್ವೀಕರಿಸುವಷ್ಟು ಹೃದಯವೈಶಾಲ್ಯವನ್ನು ಹೊಂದಿಲ್ಲ. ತಮ್ಮ ಊರಲ್ಲಿ ಎಲ್ಲವೂ ಚೆನ್ನಾಗಿದೆಯೆಂದಾದರೆ, ನಗರದ ನರಕವನ್ನು ಹಂಬಲಿಸಿ ಅವರು ವಲಸೆ ಹೋಗುತ್ತಲೇ ಇರಲಿಲ್ಲ. ಹೆಚ್ಚಿನವರು ಆರ್ಥಿಕ ಕಾರಣಕ್ಕಾಗಿ ಮಾತ್ರ ಊರನ್ನು ತೊರೆದಿರುವುದಿಲ್ಲ. ಜಾತಿ, ಧರ್ಮ ಸೇರಿದಂತೆ ಇನ್ನಿತರ ಸಾಮಾಜಿಕ ಕಾರಣಗಳಿಗಾಗಿಯೂ ಹಳ್ಳಿಯನ್ನು ತೊರೆದು ನಗರ ಸೇರಿರುತ್ತಾರೆ. ಹೀಗೆ ವಲಸೆ ಹೋಗುವ ಬಹುತೇಕ ಕಾರ್ಮಿಕರು ಕೆಳ ಜಾತಿಗೆ ಸೇರಿದವರು ಎನ್ನುವುದು ಗಮನಾರ್ಹವಾಗಿದೆ. ಜಾತಿಯ ಕಾರಣಕ್ಕಾಗಿ ಹಳ್ಳಿಗಳಲ್ಲಿ ಅವಮಾನಕ್ಕೆ ಒಳಗಾಗಬೇಕಾದ ಕಾರ್ಮಿಕರು, ಇದೀಗ ಕೊರೋನ ಕಾರಣಕ್ಕಾಗಿಯೂ ಹಳ್ಳಿಗಳಲ್ಲಿರುವ ಮೇಲ್‌ಜಾತಿಯ ಜನರ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಕಾರ್ಮಿಕರನ್ನು ಊರಿಗೆ ತಲುಪಿಸುವ ‘ಶ್ರಮಿಕ್ ರೈಲು’ಗಳು ಈಗಾಗಲೇ ‘ಕೊರೋನ ಎಕ್ಸ್‌ಪ್ರೆಸ್’ ಎಂದು ಗುರುತಿಸಲ್ಪಡುತ್ತಿವೆ. ಊರು ತಲುಪಿರುವ ಕಾರ್ಮಿಕರನ್ನು ಊರಿನ ಮುಖ್ಯಸ್ಥರು ‘ಕೊರೋನ ಸೋಂಕಿತರು’ ಎಂದೇ ಅನುಮಾನ ಪಡುತ್ತಿದ್ದಾರೆ. ಅವರ ಜಾತಿ, ಆರ್ಥಿಕ ಸ್ಥಿತಿಯ ಜೊತೆಗೆ ಇದೀಗ ಕೊರೋನ ವೈರಸ್ ಕೂಡ ಅವರನ್ನು ಊರಿನಲ್ಲಿ ‘ಅಸ್ಪಶ್ಯ’ರನ್ನಾಗಿಸಿದೆ. ಇಂತಹ ಸ್ಥಿತಿಯಲ್ಲಿ ತಮ್ಮ ತಮ್ಮ ಊರಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣೆಗೆ ಸರಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಸರಕಾರಿ ಸಿಬ್ಬಂದಿಯೂ ಸೇರಿದಂತೆ ಊರಿನ ಜನರು ವಲಸೆ ಕಾರ್ಮಿಕರ ಜೊತೆಗೆ ಅತ್ಯಂತ ಕ್ರೂರ ರೀತಿಯಲ್ಲಿ ವರ್ತಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಕುಟುಂಬಗಳೂ ಅವರನ್ನು ಮನೆಯೊಳಗೆ ಸೇರಿಸುತ್ತಿಲ್ಲ. ಊರೇ ಅವರನ್ನು ಹೊರಗಿಟ್ಟಿದೆ. ಕ್ವಾರಂಟೈನ್‌ಗೆ ಅವರಿಗೆ ಸೂಕ್ತ ವ್ಯವಸ್ಥೆಯಿಲ್ಲದೆ ಮರದ ಮೇಲೆ, ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ, ಬಯಲಿನಲ್ಲಿ ದಿನದೂಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ‘ಭಾರತವೆನ್ನುವ ಸುಸಂಸ್ಕೃತ ದೇಶ’ ಕೊರೋನ ವೈರಸ್‌ಗೆ ಅಂಜಿ ಮನೆಯೊಳಗೆ ಅವಿತು ಕೂತಿರುವ ಹೊತ್ತಿನಲ್ಲಿ, ವಲಸೆ ಕಾರ್ಮಿಕರು ‘ವಿದ್ವೇಷ’ದ ವೈರಸ್‌ಗಳಿಗೆ ಅಂಜುತ್ತಾ ದಿನ ದೂಡುತ್ತಿದ್ದಾರೆ. ಇವರ ಪಾಲಿಗೆ ಕೊರೋನ ವೈರಸ್ ಏನೇನೂ ಅಲ್ಲ. ‘ಶ್ರಮಿಕ್ ರೈಲಿ’ನಲ್ಲಿ ಅಥವಾ ಇನ್ನಿತರ ವಾಹನಗಳಲ್ಲಿ ಊರಿಗೆ ತಲುಪಿರುವ ವಲಸೆ ಕಾರ್ಮಿಕರಿಗೆ ತಮ್ಮದೇ ನೆಲದಲ್ಲಿ ನಿರ್ಭೀತಿಯಿಂದ, ಘನತೆಯಿಂದ ಬದುಕುವ ಅವಕಾಶವೂ ಸಿಗುವಂತಾಗಬೇಕು. ಕೊರೋನದ ಮರೆಯಲ್ಲಿ ನಡೆಯುತ್ತಿರುವ ಜಾತಿ ಮತ್ತು ವರ್ಗದ ಹೊಸ ಕ್ರೌರ್ಯವನ್ನು ತಡೆಯುವುದಕ್ಕೆ ಸರಕಾರ ತಕ್ಷಣ ದಾರಿ ಹುಡುಕಬೇಕಾಗಿದೆ. ಕೊರೋನ ವೈರಸ್‌ಗೆ ಔಷಧಿ ಹುಡುಕುವಷ್ಟೇ ಇದು ಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News