9 ಸಾವಿರ ಗೃಹ ರಕ್ಷಕ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆ ಮಾಡಲು ಮುಂದಾದ ರಾಜ್ಯ ಸರಕಾರ ?

Update: 2020-06-01 17:48 GMT

ಬೆಂಗಳೂರು, ಜೂ.1: ಕೊರೋನ ಸೋಂಕಿನ ವಿರುದ್ಧ ಸೈನಿಕರಾಗಿ ದುಡಿಯುತ್ತಿದ್ದ ಪೊಲೀಸ್ ಇಲಾಖೆಯ ಸುಮಾರು 9 ಸಾವಿರ ಗೃಹ ರಕ್ಷಕ ಸಿಬ್ಬಂದಿಯನ್ನು ಆರ್ಥಿಕ ಮಿತವ್ಯಯ ಕಾರಣವೊಡ್ಡಿ ಸೇವೆಯಿಂದಲೇ ಬಿಡುಗಡೆಗೊಳಿಸುವ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಕಾರ್ಮಿಕರಿಗೆ ಲಾಕ್‍ಡೌನ್ ವೇಳೆ ಕೆಲಸದಿಂದ ವಜಾಗೊಳಿಸಬಾರದು ಎಂಬ ನಿಯಮಾವಳಿ ಇದೆ. ಆದರೆ, ಪೊಲೀಸ್ ಇಲಾಖೆಯಲ್ಲಿಯೇ ಇದೀಗ ನಿಯಮಾವಳಿಯ ಉಲ್ಲಂಘಿಸಿ ಪೊಲೀಸ್ ಪೇದೆಗಳಂತೆ ಸೇವೆ ಸಲ್ಲಿಸುತ್ತಿದ್ದ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಕರ್ತವ್ಯದಿಂದ ಕೈಬಿಡಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಪೊಲೀಸ್ ಇಲಾಖೆಯ ಎಡಿಜಿಪಿ ಒಳಗೊಂಡಂತೆ ಎಲ್ಲ ವಲಯಗಳು ಸೇರಿ 3,695 ಜನರನ್ನು ಮಾತ್ರ ನೇಮಿಸಿಕೊಳ್ಳಲು ಅವಕಾಶವಿದೆ. ಆದರೆ ರಾಜ್ಯದಲ್ಲಿ 25 ಸಾವಿರ ಗೃಹ ರಕ್ಷಕರಿದ್ದು, ಸದ್ಯ ಪೊಲೀಸ್ ಇಲಾಖೆಯಲ್ಲಿಯೇ 12 ಸಾವಿರ ರಕ್ಷಕರಿದ್ದಾರೆ. ಹೀಗಾಗಿ, ಆರ್ಥಿಕ ಮಿತವ್ಯಯ ಹಾಗೂ ಹೆಚ್ಚಿನ ಹೊರೆ ತಪ್ಪಿಸಲು ಪೊಲೀಸ್ ಇಲಾಖೆ ಮರು ಹಂಚಿಕೆ ಮಾಡುವ ಮೂಲಕ ಸಾವಿರಾರು ಗೃಹ ರಕ್ಷಕರನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ, ಜೂ.1ರಿಂದ ಎಡಿಜಿಪಿ ಕಚೇರಿಯ 110, ಬೆಂಗಳೂರು ಕಮಿಷನರೇಟ್‍ ನ 1300, ಇತರ ಕಮಿಷನರೇಟ್‍ ನ 625, ಕೇಂದ್ರ ವಲಯ 575, ದಕ್ಷಿಣ ವಲಯ 475, ಪೂರ್ವ ವಲಯ 290, ಪಶ್ಚಿಮ ವಲಯ 300 ಗೃಹ ರಕ್ಷಕ ಸಿಬ್ಬಂದಿ ಮಾತ್ರ ಮರು ಹಂಚಿಕೆಯಾಗಿ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಉಳಿದವರು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News