ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುತ್ತಿವೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್

Update: 2020-06-01 17:49 GMT

ಮೈಸೂರು,ಜೂ.1: ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುತ್ತಿವೆ. ಇದು ಚಿಲ್ಲರೆ ರಾಜಕಾರಣ ಮಾಡುವ ಸಮಯವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರೋಧ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಟೀಕೆ ಮಾಡೋದಕ್ಕೆ ಸರಿಯಾದ ವಿಷಯ ಇಲ್ಲ. ವಲಸೆ ಕಾರ್ಮಿಕರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾವು ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೈಗೊಂಡಿದ್ದೇವೆ. ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಃ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿದೆ. ಇದೀಗ ಟೀಕೆ ಮಾಡೋದಕ್ಕೆ ಅಸ್ತ್ರ ಇಲ್ಲ ಅಂತ ಚಿಲ್ಲರೆ ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದರು.

ಪೌರತ್ವ ಬಯಸಿ ಬಂದವರಿಗೆ ಪೌರತ್ವ ಕೊಡುವ ಕೆಲಸ ನಾವು ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಅತ್ಯುತ್ತಮ ಕೆಲಸ. ನಾವು ಜಮ್ಮು ಕಾಶ್ಮೀರದಲ್ಲಿ ಕಟ್ಟು ನಿಟ್ಟು ಮಾಡಿದ ಬಳಿಕ ಯಾರೂ ಅಲ್ಲಿಗೆ ಬಂದಿಲ್ಲ. ಬಂದು ಬಾಂಬ್ ಇಡುವ ಕೆಲಸ ಮಾಡಿಲ್ಲ. ಈ ಮೊದಲು ವಿಜ್ಞಾನ ಭವನಕ್ಕೆ ಬಂದು ಬಾಂಬ್ ಇಡುವ ಕೆಲಸ ಆಗಿತ್ತು. ಕೇರಳಕ್ಕೆ ಬಂದು ಬಾಂಬ್ ಇಡುವ ಕೆಲಸ ಮಾಡಿದ್ದಾರೆ. ಇದೀಗ ಒಂದೇ ಒಂದು ಬಾಂಬ್ ಇಡುವ ಕೆಲಸ ಆಗಿಲ್ಲ. ಇದೆಲ್ಲವು ನಮ್ಮ ಸರ್ಕಾರದ ಕಾರ್ಯವೈಖರಿ. 20 ಲಕ್ಷ ಕೋಟಿ ರೂಪಾಯಿಯನ್ನು ದೇಶಕ್ಕೆ ನೀಡಲಾಗಿದೆ. ಆತ್ಮನಿರ್ಭರ್ ಯೋಜನೆ ಮೂಲಕ ಜನರ ಜೊತೆ ನಾವು ಇದ್ದೇವೆ. ತಳವಾರ, ಪರಿವಾರ ಸಮುದಾಯಕ್ಕೂ ಅನುಕೂಲ ಮಾಡಿ ಕೊಟ್ಟಿದ್ದೇವೆ. ಎಲ್ಲ ವಿಚಾರದಲ್ಲೂ ನಾವು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇವೆ. ಕೇಂದ್ರದ ಜೊತೆಗೆ ರಾಜ್ಯದಲ್ಲಿಯೂ ಅತ್ಯುತ್ತಮ ಕೆಲಸ ಆಗಿದೆ ಎಂದು ಕೇಂದ್ರದಲ್ಲಿ ಬಿಜೆಪಿ ಒಂದು ವರ್ಷ ಪೂರೈಸಿದ ಬಗ್ಗೆ ಪ್ರಧಾನಿ ಮೋದಿಯವರನ್ನು ಹಾಡಿಹೊಗಳಿದರು.

ಬಿಜೆಪಿಯ ಕಾರ್ಯ ವೈಖರಿ ಬಗ್ಗೆ ಪ್ರಸ್ತಾಪಿಸಿ ಪೌರತ್ವ, ಕೋವಿಡ್ ನಿಯಂತ್ರಣ, 20 ಲಕ್ಷ ಕೋಟಿ ಹಣದ ಕುರಿತು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ, ಹರ್ಷವರ್ಧನ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News