70 ವರ್ಷಗಳಲ್ಲಿ ಆಗದ ಸಾಧನೆ ಒಂದೇ ವರ್ಷದಲ್ಲಿ ಆಗಿದೆ: ಡಿಸಿಎಂ ಅಶ್ವಥ್ ನಾರಾಯಣ

Update: 2020-06-01 18:05 GMT

ರಾಮನಗರ, ಜೂ.1: ಕಳೆದ 70 ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ 2.0 ಸರಕಾರ ಮೊದಲ ವರ್ಷದಲ್ಲೇ ಸಾಧಿಸಿ, ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ರಾಮನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜನಾದೇಶದೊಂದಿಗೆ 2019 ಮೇ 30ರಂದು ಎರಡನೇ ಅವಧಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂತು. ಈ ಜನಾದೇಶವನ್ನು ಉತ್ತಮ ಆಡಳಿತ ನೀಡಲು ಬಳಸಿಕೊಂಡು, ದೇಶಕ್ಕೆ ಸ್ಥಿರ ಸರಕಾರ ಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ತಂತ್ರಜ್ಞಾನ ಬಳಕೆ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ದೃಢ ಸಂಕಲ್ಪದೊಂದಿಗೆ ಮೋದಿ 2.0 ಸರಕಾರ ಸಾಧಿಸಿ ತೋರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮೊದಲ ಅವಧಿಯಲ್ಲಿ ಜಾರಿ ತಂದ ಜನಧನ್, ವಿಮೆ, ಪಿಂಚಣಿ, ಆಯುಷ್ಮಾನ್, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಉಜಾಲಾ, ಉಜ್ವಲಾ, ಜನೌಷಧಿ ಮುಂತಾದ ಜನಪರ ಯೋಜನೆಗಳು ಹಾಗೂ ನೋಟ್ ಬ್ಯಾನ್, ಹಣಕಾಸು ವಹಿವಾಟಿಗೆ ಆಧಾರ್ ಕಡ್ಡಾಯಗೊಳಿಸುವ ಕಠಿಣ ನಿರ್ಧಾರಗಳು ದೇಶಕ್ಕೆ ಭದ್ರ ಬುನಾದಿಯಾಗಿವೆ. 30 ಕೋಟಿ ಜನರನ್ನು ಹೊಸದಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ತಂದ ಸರಕಾರ, ಯೋಜನೆಯ ಲಾಭವನ್ನು ಅವರ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತಂದಿತು. ಮುಖ್ಯವಾಗಿ, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸುವಂಥ ಮಹತ್ವದ ನಿರ್ಣಯಗಳೇ ಎರಡನೇ ಅವಧಿಗೂ ಜನ ಮೋದಿ ಸರಕಾರವನ್ನು ಆಯ್ಕೆ ಮಾಡಲು ಕಾರಣವಾದವು ಎಂದರು.

ತ್ರಿವಳಿ ತಲಾಖ್ ನಿಷೇಧ: ತ್ರಿವಳಿ ತಲಾಖ್ ನಿಷೇಧಿಸುವ 'ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ವಿಧೇಯಕ 2019’ ಜಾರಿಗೆ ತರುವ ಮೂಲಕ ಮುಸ್ಲಿಂ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ಮೋದಿ ಸರಕಾರ ತಡೆಗಟ್ಟಿದೆ. ಜತೆಗೆ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿತಂದು, ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಬಂದಿದೆ ಎಂದು ಹೇಳಿದರು.

ಕೊವಿಡ್ ನಿರ್ವಹಣೆ ವಿಶ್ವಕ್ಕೆ ಪ್ರೇರಣೆ: ಕೊವಿಡ್‍ನಂತಹ ಪರಿಸ್ಥಿತಿಯಲ್ಲಿ 132 ಕೋಟಿ ಜನರ ರಕ್ಷಣೆಗೆ ಬಂದವರು ಪ್ರಧಾನಿ. ಅಗತ್ಯ ಕ್ರಮ ವಹಿಸದೇ ಸೋಂಕು ವ್ಯಾಪಕವಾಗಿ ಬೇರೆ ದೇಶಗಳು ತತ್ತರಿಸಿಹೋದ ಸಂದರ್ಭದಲ್ಲಿ ಇಡೀ ವಿಶ್ವ ಈಗ ಭಾರತದತ್ತ ಬೆರಗಿನಿಂದ ನೋಡುವಂತಾಗಿದೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News