ಜಾರ್ಜ್ ಫ್ಲಾಯ್ಡ್ ಸಾವು ‘ನರಹತ್ಯೆ’: ಮರಣೋತ್ತರ ವರದಿ

Update: 2020-06-02 16:41 GMT

ಮಿನಪೊಲಿಸ್ (ಅಮೆರಿಕ), ಜೂ. 2: ಜಾರ್ಜ್ ಫ್ಲಾಯ್ಡ್ ಸಾವು ಕುತ್ತಿಗೆಯ ಮೇಲೆ ಒತ್ತಡ ಬಿದ್ದ ಕಾರಣದಿಂದಾಗಿ ಸಂಭವಿಸಿದೆ ಹಾಗೂ ಅದು ‘ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ’ (ಹೋಮಿಸೈಡ್)ಯಾಗಿದೆ ಎಂದು ಸೋಮವಾರ ಬಿಡುಗಡೆಗೊಳಿಸಲಾದ ಅಧಿಕೃತ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.

ಆಫ್ರಿಕನ್ ಅಮೆರಿಕನ್ ವ್ಯಕ್ತಿಯ ಸಾವು ಮೇ 25ಂದು ಆತನನ್ನು ಪೊಲೀಸರು ನಕಲಿ 20 ಡಾಲರ್ ನೋಟೊಂದನ್ನು ಚಲಾಯಿಸಿದ ಆರೋಪದಲ್ಲಿ ಬಂಧಿಸುತ್ತಿರುವಾಗ ಸಂಭವಿಸಿದೆ. ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್ ಗೆ ಕೈಕೋಳ ತೊಡಿಸಿ ನೆಲಕ್ಕೆ ಕೆಡವಿ ಆತನ ಕುತ್ತಿಗೆಯ ಮೇಲೆ ಮೊಣಕಾಲಿಟ್ಟು ಕುಳಿತುಕೊಂಡಾಗ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. “ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಫ್ಲಾಯ್ಡ್ ಪದೇ ಪದೇ ಗೋಗರೆಯುತ್ತಿದ್ದರೂ ಮಿಸುಕದ ಪೊಲೀಸ್ ಅಧಿಕಾರಿ ಕರಿಯ ವ್ಯಕ್ತಿಯ ಕುತ್ತಿಗೆಯ ಮೇಲೆ 9 ನಿಮಿಷ ಮೊಣಕಾಲೂರಿದ್ದಾರೆ.

ಇದರ ಬೆನ್ನಿಗೇ, ಆಡಳಿತ ನಡೆಸುತ್ತಿರುವವರಲ್ಲಿ ಆಫ್ರಿಕನ್ ಅಮೆರಿಕನ್ ಸಮುದಾಯದ ಬಗ್ಗೆ ಇರುವ ಪೂರ್ವಾಗ್ರಹವನ್ನು ಪ್ರತಿಭಟಿಸಿ ಅಮೆರಿಕದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ಸ್ಫೋಟಿಸಿದೆ.

‘‘ಕಾನೂನು ಅನುಷ್ಠಾನದ ವೇಳೆ ನಡೆಯುವ ಕೊಸರಾಟ, ನಿರ್ಬಂಧ ಮತ್ತು ಕುತ್ತಿಗೆ ಸಂಕೋಚನದ ಹಿನ್ನೆಲೆಯಲ್ಲಿ 46 ವರ್ಷದ ಜಾರ್ಜ್ ಫ್ಲಾಯ್ಡ್ ಹೃದಯಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ. ಈ ಸಾವು ಉದ್ದೇಶಪೂರ್ವಕವಲ್ಲದ ಮಾನವಹತ್ಯೆಯಾಗಿದೆ’’ ಎಂದು ಮಿನಪೊಲಿಸ್‌ನ ಹೆನ್‌ಪಿನ್ ಕೌಂಟಿ ವೈದ್ಯಕೀಯ ತಪಾಸಕರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಉಸಿರುಗಟ್ಟಿ ಸಾವು: ಕುಟುಂಬ ನಡೆಸಿದ ಶವಮಹಜರು ವರದಿ

ಜಾರ್ಜ್ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಪ್ರತ್ಯೇಕವಾಗಿ ನಡೆಸಿದ ಮರಣೋತ್ತರ ಪರೀಕ್ಷೆ ತಿಳಿಸಿದೆ. ಸರಕಾರಿ ಮರಣೋತ್ತರ ವರದಿ ಹೇಳಿರುವಂತೆ ಅವರು ಹೃದಯದ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂದು ಅದು ಹೇಳಿದೆ ಎಂದು ಕುಟುಂಬದ ವಕೀಲರು ಸೋಮವಾರ ಪ್ರಕಟಿಸಿದ್ದಾರೆ.

‘‘ರವಿವಾರ ಫ್ಲಾಯ್ಡ್ ರ ಮರಣೋತ್ತರ ಪರೀಕ್ಷೆ ನಡೆಸಿದ ಸ್ವತಂತ್ರ ವೈದ್ಯಕೀಯ ತಪಾಸಕರು, ನಿರಂತರ ಒತ್ತಡದಿಂದಾಗಿ ಉಸಿರುಗಟ್ಟಿರುವುದು ಸಾವಿಗೆ ಕಾರಣ ಎಂದು ತೀರ್ಮಾನಿಸಿದ್ದಾರೆ’’ ಎಂದು ವಕೀಲ ಬೆನ್ ಕ್ರಂಪ್ ತಿಳಿಸಿದರು.

ಫ್ಲಾಯ್ಡ್ ರ ಮೃತದೇಹವನ್ನು ನಾನು ಪರೀಕ್ಷೆ ಮಾಡಿದ್ದೇನೆ ಎಂದು ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಭಾಗದ ನಿರ್ದೇಶಕಿ ಅಲಿಶಿಯ ವಿಲ್ಸನ್ ಹೇಳಿದ್ದಾರೆ.

‘‘ಕೃತಕ ಉಸಿರುಗಟ್ಟುವಿಕೆ ಸಾವಿಗೆ ಕಾರಣ ಹಾಗೂ ಮಾನವಹತ್ಯೆ ಸಾವಿನ ವಿಧಾನ ಎನ್ನುವುದಕ್ಕೆ ಪೂರಕವಾದ ಪುರಾವೆಗಳಿವೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News