ಮಳೆ ಮುನ್ನೆಚ್ಚರಿಕೆ: ಕೊಡಗಿಗೆ ಬಂದ ಎನ್‍ ಡಿ ಆರ್ ಎಫ್ ತಂಡ

Update: 2020-06-02 13:49 GMT

ಮಡಿಕೇರಿ,ಜೂ.2 : ಕಳೆದ 2 ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ಸಿಲುಕುತ್ತಿರುವ ಕೊಡಗು ಜಿಲ್ಲೆಯ ಜನರ ರಕ್ಷಣೆಗಾಗಿ ಈ ಬಾರಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಯೋಧರು ಬಂದಿಳಿದ್ದಾರೆ. 

ಆಂಧ್ರ ಪ್ರದೇಶದ ಗುಂಟೂರು ವಿಜಯವಾಡದಲ್ಲಿರುವ ಎನ್‍ಡಿಆರ್‍ಎಫ್‍ನ 10ನೇ ಬಟಾಲಿಯನ್‍ನ 25 ಮಂದಿ ಯೋಧರು ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಗೆ ಆಗಮಿಸಿದ್ದು, ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಯಲ್ಲಿ ಬೀಡು ಬಿಡಲಿದ್ದಾರೆ. ಕೊಡಗು ಜಿಲ್ಲಾಡಳಿತದ ಕೋರಿಕೆಯ ಮೇಲೆ ಈ ಯೋಧರ ತಂಡ ಮಡಿಕೇರಿಗೆ ಆಗಮಿಸಿದ್ದು, ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಅಧಿಕಾರಿ ಅನನ್ಯ ವಾಸುದೇವ್ ಅವರು ರಕ್ಷಣಾ ಯೋಧರನ್ನು ಮೈತ್ರಿ ಭವನದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. 

ಮಡಿಕೇರಿಗೆ ಆಗಮಿಸಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಾಂಡರ್ ಆರ್.ಕೆ. ಉಪಾಧ್ಯಾಯ, ಕೊಡಗು ಜಿಲ್ಲಾಡಳಿತದ ಕೋರಿಕೆಯಂತೆ ನಾವು ಇಲ್ಲಿಗೆ ಆಗಮಿಸಿದ್ದು, ಮಳೆಗಾಲ ಮುಗಿಯುವ ಅಥವಾ ಜಿಲ್ಲಾಡಳಿತದ ಮುಂದಿನ ಸೂಚನೆಯವರೆಗೆ ಜಿಲ್ಲೆಯಲ್ಲಿಯೇ ಇರುವುದಾಗಿ ತಿಳಿಸಿದರು. ಮಳೆಯ ಅನಾಹುತಗಳನ್ನು ಅಳೆಯಲು ಸಾಧ್ಯವಿಲ್ಲ. ಮಳೆಗಾಲ ಭೂಕುಸಿತ, ಅತ್ಯಧಿಕ ಮಳೆಯ ಸಂದರ್ಭ ಪ್ರವಾಹ, ರಸ್ತೆ ಸಂಚಾರ ಬಂದ್ ಮತ್ತಿತ್ತರ ಸಮಸ್ಯೆಗಳು ತಲೆ ದೋರುತ್ತವೆ. ಅಂತಹ ಸಂದರ್ಭ ತಕ್ಷಣವೇ ರಕ್ಷಣಾ ಕಾರ್ಯಕ್ಕೆ ತೆರಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಜಿಲ್ಲೆಗೆ ಬಂದಿದ್ದೇವೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ರಕ್ಷಣಾ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಬೆಳಗಾವಿ ಹಾಗೂ ಧಾರವಾಡದಲ್ಲಿ ಒಟ್ಟು 4 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ ಕೊಡಗು, ಮಂಗಳೂರು, ಬಾಗಲಕೋಟೆ, ಬೆಳಗಾವಿಯಲ್ಲಿಯೂ ತಮ್ಮ ತಂಡ ಸೇವೆ ಸಲ್ಲಿಸಿದೆ. ಮಾತ್ರವಲ್ಲದೇ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ಒಡಿಸಾದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಮಾಹಿತಿ ನೀಡಿದರು. ನಮ್ಮ ಒಂದು ತಂಡ ಪ್ರಸ್ತುತ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ನಿಯೋಜನೆ ಮಾಡಲಾಗಿದೆ ಎಂದು ಕಮಾಂಡರ್ ಆರ್.ಕೆ. ಉಪಾಧ್ಯಯ ಹೇಳಿದರು.

ಪ್ರವಾಹ, ಭೂ ಕುಸಿತ, ಪ್ರಾಕೃತಿಕ ವಿಕೋಪದಲ್ಲಿ ಕಟ್ಟಡ ಧ್ವಂಸ ಪ್ರಕರಣ ಹಾಗೂ ತುರ್ತು ಸಂದರ್ಭಗಳು ಎದುರಾದಾಗ ಜನರ ಜೀವ ರಕ್ಷಣೆಗೆ ಬಳಸಬೇಕಾದ ಎಲ್ಲಾ ಪರಿಕರಗಳನ್ನು ಹೊತ್ತು ತರಲಾಗಿದೆ ಎಂದು ಕಮಾಂಡರ್ ಆರ್.ಕೆ. ಉಪಾಧ್ಯಾಯ ಅವರು ಮಾಹಿತಿ ನೀಡಿದರು.
ಎನ್‍ಡಿಆರ್‍ಎಫ್‍ನ 10ನೇ ಬೆಟಾಲಿಯನ್‍ನ ಕಮಾಂಡರ್ ಆರ್.ಕೆ. ಉಪಾಧ್ಯಾಯ ಈ ರಕ್ಷಣಾ ತಂಡವನ್ನು ಮುನ್ನಡೆಸುತ್ತಿದ್ದು, ಇದೀಗ 3ನೇ ಬಾರಿಗೆ ಎನ್‍ಡಿಆರ್‍ಎಫ್ ತಂಡ ಕೊಡಗು ಜಿಲ್ಲೆಗೆ ಆಗಮಿಸುತ್ತಿದೆ. ಕಮಾಂಡರ್ ಆರ್.ಕೆ. ಉಪಾಧ್ಯಾಯ ನೇತೃತ್ವದ ಯೋಧರ ತಂಡ ಕಳೆದ ವರ್ಷವೂ ಕೂಡ ಕೊಡಗು ಜಿಲ್ಲೆಗೆ ಬಂದಿತ್ತಲ್ಲದೇ, ನದಿ ಪ್ರವಾಹದಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಈ ಯೋಧರು ಕೆಲ ದಿನಗಳ ಹಿಂದೆ ಒಡಿಸ್ಸಾದಲ್ಲಿ ಘಟಿಸಿದ ಇಂಫಾನ್ ಚಂಡ ಮಾರುತದ ಭೀಕರ ಘಳಿಗೆಯಲ್ಲೂ ಅಲ್ಲಿನ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಿರ್ವಹಿಸಿ ಇದೀಗ ಮಡಿಕೇರಿಗೆ ಬಂದಿಳಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News