ರಾಜ್ಯದಲ್ಲಿ ಇಂದು 388 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ

Update: 2020-06-02 17:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.2: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ವಲಸೆ ಕಾರ್ಮಿಕರಲ್ಲಿಯೇ ಅಧಿಕ ಕೊರೋನ ಪ್ರಕರಣಗಳು ವರದಿಯಾಗುತ್ತಿದ್ದು, ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆಯವರೆಗೆ 388 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, ಇದು ರಾಜ್ಯದಲ್ಲಿ ಒಂದೇ ದಿನ ದೃಢಪಟ್ಟ ಪ್ರಕರಣಗಳಲ್ಲಿ ಅಧಿಕ ಪ್ರಮಾಣದ್ದಾಗಿದೆ.

ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾಗಿದೆ. ಮಂಗಳವಾರ 75 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 1403 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 2339 ಪ್ರಕರಣಗಳು ಸಕ್ರಿಯವಾಗಿದ್ದು, 14 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ 150, ಕಲಬುರಗಿ 100, ಬೆಂಗಳೂರು ನಗರ 12, ಯಾದಗಿರಿ 5, ಮಂಡ್ಯ 4, ರಾಯಚೂರು 16, ಬೆಳಗಾವಿ 51, ಹಾಸನ 9, ಬೀದರ್ 10, ದಾವಣಗೆರೆ 7, ಚಿಕ್ಕಬಳ್ಳಾಪುರ 2, ವಿಜಯಪುರ 4, ಬಾಗಲಕೋಟೆ 9, ಧಾರವಾಡ 2, ತುಮಕೂರು 2, ಕೋಲಾರ 1, ಬೆಂಗಳೂರು ಗ್ರಾಮಾಂತರ 3, ಹಾವೇರಿ 1 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

ರಾಜ್ಯದಲ್ಲಿ 32239 ಜನರನ್ನು ನಿಗಾವಣೆಯಲ್ಲಿಡಲಾಗಿದ್ದು, 17503 ಪ್ರಥಮ ಸಂಪರ್ಕಿತರು ಹಾಗೂ 14736 ದ್ವಿತೀಯ ಸಂಪರ್ಕಿತ ವ್ಯಕ್ತಿಗಳಾಗಿದ್ದಾರೆ. ಇಂದು ಒಟ್ಟು 14812 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 13915 ಮಾದರಿಗಳು ನೆಗೆಟಿವ್ ಬಂದಿವೆ. ಇದುವರೆಗೂ 319228 ಮಾದರಿಗಳು ಪರೀಕ್ಷಿಸಲಾಗಿದ್ದು, 310967 ಮಾದರಿಗಳು ನೆಗೆಟಿವ್ ಬಂದಿದೆ.

ಮಂಗಳವಾರ ಬಿಬಿಎಂಪಿ ವ್ಯಾಪ್ತಿಯ 31 ಜ್ವರಚಿಕಿತ್ಸಾಲಯದಲ್ಲಿ 199 ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗಿದೆ. ರಾಜ್ಯದ 528 ಜ್ವರಚಿಕಿತ್ಸಾಲಯದಲ್ಲಿ 19300 ವ್ಯಕ್ತಿಗಳನ್ನು ಹಾಗೂ 104 ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ವೈದ್ಯಕೀಯ ಆಸ್ಪತ್ರೆಗಳಲ್ಲಿ 2380 ವ್ಯಕ್ತಿಗಳನ್ನು ತಪಾಸಣೆ ನಡೆಸಲಾಗಿದೆ ಎಂದು ಇಲಾಖೆಯು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News