ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ: ವಾಟಾಳ್ ನಾಗರಾಜ್

Update: 2020-06-02 15:20 GMT

ಮೈಸೂರು,ಜೂ.2: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ನಗರದ ಹಾಡ್ರ್ಜಿಂಗ್ ವೃತ್ತದಲ್ಲಿ ಮಂಗಳವಾರ ಆನ್‍ಲೈನ್ ಶಿಕ್ಷಣ ರದ್ಧುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ, ಯಡಿಯೂರಪ್ಪ ಮತ್ತು ಅವರ ಸರ್ಕಾರ ಸುಭದ್ರವಾಗಿದೆ. ಈಗಿರುವ ರಾಜ್ಯದ ಎಲ್ಲಾ ಶಾಸಕರು, ಸಂಸದರು ಯಡಿಯೂರಪ್ಪ ಅವರಿಂದಲೇ ಬೆಳೆದಿರುವುದು. ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎಂದು ಹೇಳಿದರು.

ಹತ್ತು ಸಾವಿರ ವೋಲ್ಟ್ಸ್ ಬಲ್ಬ್ ಹಾಕಿ ಹುಡುಕಿದರು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂಥ ನಾಯಕ ಸಿಗಲ್ಲ. ಆದರೆ ಚಾಡಿ ಮಾತು ಕೇಳುವುದು ಮತ್ತು ದ್ವೇಷ ರಾಜಕೀಯವನ್ನು ಯಡಿಯೂರಪ್ಪ ಬಿಡಬೇಕು. ಇಂತಹ ವಿಚಾರಗಳನ್ನು ಯಡಿಯೂರಪ್ಪ ಬಿಟ್ಟಲ್ಲಿ ಇವರಂತಹ ನಾಯಕ ಬಿಜೆಪಿಯಲ್ಲಿ ಮತ್ತೊಬ್ಬ ಇಲ್ಲ ಎಂದರು.

ಸಂಸದ ವಿ.ಶ್ರೀನಿವಾಸಪ್ರಸಾದ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರದು ಮತ್ತು ನನ್ನದು 40 ವರ್ಷದ ಸ್ನೇಹ. ಅವರ ಆರೋಗ್ಯ ವಿಚಾರಿಸಿದೆ ಅಷ್ಟೆ. ಬಿಜೆಪಿಯವರು ನನ್ನನ್ನು ಎಂಎಲ್‍ಸಿ ಮಾಡಿದರೆ ಬಿಜೆಪಿಗೆ ಶಕ್ತಿ ಮತ್ತು ಗೌರವ ಬರುತ್ತದೆ. ರಾಜ್ಯದ ಜನ ಅವರನ್ನು ಮೆಚ್ಚುತ್ತಾರೆ ಎಂದರು.

ಎಂಎಲ್‍ಸಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ: ನಾನು ಗುಲ್ಬರ್ಗ ಈಶಾನ್ಯ ಪದವೀಧರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯವಿದೆ. ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ನಿರ್ಧಾರ ಮಾಡಿಲ್ಲ. ಒಟ್ಟಿನಲ್ಲಿ ಎಂಎಲ್‍ಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಖಚಿತ ಎಂದು ಸ್ಪಷ್ಟವಾಗಿ ಹೇಳಿದ ವಾಟಾಳ್ ನಾಗರಾಜ್, ಇನ್ನೂ ಮೂರು ಜನ್ಮ ಕಳೆದರು ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದರು.

"ಆನ್ ಲೈನ್ ಶಿಕ್ಷಣ ಪದ್ದತಿ ಕೈಬಿಡಿ"
ಎಸೆಸೆಲ್ಸಿ, ಪದವಿ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಜತೆಗೆ ಆನ್ ಲೈನ್ ಶಿಕ್ಷಣ ಪದ್ದತಿ ಕೈಬಿಡವಂತೆ ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ  ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.

ನಗರದ ಹಾಡ್ರ್ಜಿಂಗ್ ವೃತ್ತದ ಬಳಿ ಮಂಗಳವಾರ ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ಪ್ರತಿಭಟನೆ ನಡೆಸಿದರು. ಆನ್ ಲೈನ್ ಇದೊಂದು ದೊಡ್ಡ ನರಕ. ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸರಿ ಇಲ್ಲ, ಕೆಲವರಿಗೆ ಮೊಬೈಲ್ ಬಳಸೋಕೆ ಬರೋಲ್ಲ. ಕೊರೋನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಮಂತ್ರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಎಸೆಸೆಲ್ಸಿ, ಡಿಗ್ರಿ ಪರೀಕ್ಷೆಗಳನ್ನ ನಡೆಸಕೂಡದು. ಯಾವುದೇ ಕಾರಣಕ್ಕೂ ಆನ್ ಲೈನ್ ಶಿಕ್ಷಣ ಮಾಡಕೂಡದು ಎಂದು ಆಗ್ರಹಿಸಿದರು.

ಎಸೆಸೆಲ್ಸಿ, ಪ್ರಥಮ, ದ್ವೀತೀಯ, ಅಂತಿಮ ಪದವಿ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪದವಿ ಪರೀಕ್ಷೆಗಳ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲೇಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರವಾದ ಹೋರಾಟ ಅನಿವಾರ್ಯ. ಕೂಡಲೇ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News