ಕೊರೋನ ಸಂಕಷ್ಟದ ನಡುವೆ ಹಾಲಿನ ಖರೀದಿ ದರ ಇಳಿಕೆ: ಹೈನುಗಾರರಿಗೆ ಆಘಾತ

Update: 2020-06-02 16:31 GMT

ಬೆಂಗಳೂರು, ಜೂ. 2: ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಹೈನುಗಾರರಿಗೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಹಾಲು ಖರೀದಿ ದರವನ್ನು ಲೀಟರ್ 1 ರೂ.ಇಳಿಕೆ ಮಾಡುವ ಮೂಲಕ ಶಾಕ್ ನೀಡಿದೆ.

ಸುದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿರುವ ಹಾಲು ಉತ್ಪಾದಕರಿಗೆ ಮಂಡಳಿ ಹಾಲಿನ ಖರೀದಿ ದರವನ್ನು ಏಕಾಏಕಿ ಇಳಿಕೆ ಮಾಡಿರುವುದು ಸರಿಯಲ್ಲ ಎಂದು ಹಾಲು ಉತ್ಪಾದಕರು ಒಕ್ಕೂಟದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಲು ಪೂರೈಕೆ ಪ್ರಮಾಣ ಹೆಚ್ಚಾಗಿದೆ. ಆದರೆ, ಅದಕ್ಕೆ ಅನುಗುಣವಾಗಿ ಹಾಲಿನ ಬೇಡಿಕೆ ಇಲ್ಲ. ಜೂ. 1ಕ್ಕೆ 17ಲಕ್ಷ ಲೀಟರ್ ಹಾಲು ಬಂದಿದ್ದು, ಜೂ.2 17.20ಲಕ್ಷ ಲೀಟರ್ ಹಾಲನ್ನು ರೈತರು ಪೂರೈಕೆ ಮಾಡಿದ್ದಾರೆ. ಹೀಗಾಗಿ ಎಲ್ಲ ಹಾಲನ್ನು ಖರೀದಿಸಬೇಕೆಂದರೆ ಖರೀದಿ ದರ ಇಳಿಕೆ ಅನಿವಾರ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದ್ದಾರೆ.

ಹೊಟೇಲ್‍ಗಳು, ಬೀದಿಬದಿಯ ಅಂಗಡಿಗಳು ತೆರೆಯದ ಹಿನ್ನೆಲೆಯಲ್ಲಿ ಹಾಲು ಮಾರಾಟದಲ್ಲಿ ಸಮಸ್ಯೆ ಆಗುತ್ತಿದೆ. ಅಂದಿನ ಹಾಲು ಅಂದೇ ಮಾರಾಟ ಮಾಡಿದರೆ ಒಕ್ಕೂಟಕ್ಕೆ ಸಮಸ್ಯೆ ಆಗುವುದಿಲ್ಲ.  ಹಾಲು ಉಳಿದರೆ ಅದನ್ನು ಪೌಡರ್ ಮಾಡಲು ಹೆಚ್ಚಿನ ಹಣ ವೆಚ್ಚ ಮಾಡಬೇಕಿದ್ದು, ಇದರಿಂದ ಒಕ್ಕೂಟಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಸಿತಗೊಂಡಿದ್ದ ಹಾಲಿನ ಪೂರೈಕೆ ಇದೀಗ ಹೆಚ್ಚಳವಾಗುತ್ತಿದೆ. 13ಲಕ್ಷ ಲೀಟರ್‍ನಿಂದ 17.20 ಲಕ್ಷ ಲೀಟರ್‍ಗೆ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲಿ ಇದು 20ಲಕ್ಷ ಏರಿಕೆಯಾಗುವ ಸಾಧ್ಯತೆಗಳಿವೆ. ಆದರೆ, ದಿನಕ್ಕೆ 8ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಗುತ್ತಿದೆ. ಉಳಿದ 9ಲಕ್ಷ ಲೀಟರ್‍ಗೂ ಅಧಿಕ ಹಾಲನ್ನು ಪೌಡರ್ ಮಾಡಿ ದಾಸ್ತಾನು ಮಾಡುವ ಸ್ಥಿತಿ ಇದೆ. ಇದರಿಂದ ಒಕ್ಕೂಟಕ್ಕೆ 13 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗುತ್ತಿದೆ. ಇದರನ್ನು ಸರಿದೂಗಿಸಲು ಖರೀದಿ ದರ ಇಳಿಕೆ ಮಾಡಲಾಗಿದೆ ಎಂದ ಅವರು ಸ್ಪಷ್ಟಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News