ಪೋಷಕರ ವಿರೋಧದ ನಡುವೆಯೂ ಶಾಲೆ ಪುನಾರಂಭಕ್ಕೆ ರಾಜ್ಯ ಸರಕಾರ ಆದೇಶ

Update: 2020-06-02 18:18 GMT

ಬೆಂಗಳೂರು, ಜೂ.2: ರಾಜ್ಯದಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪೋಷಕರ ವಿರೋಧದ ನಡುವೆಯೂ ಶಾಲೆಗಳ ದಾಖಲಾತಿ ಪ್ರಕ್ರಿಯೆಗೆ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದ್ದು, ಜೂ.5ರಿಂದ ಶಿಕ್ಷಕರು ಶಾಲೆಗಳನ್ನು ತೆರೆಯುವುದು ಮತ್ತು ಜೂ.8ರಿಂದ ದಾಖಲಾತಿ ಆರಂಭಕ್ಕೆ ಸೂಚಿಸಲಾಗಿದೆ.

ಜೂ.5ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಆಡಳಿತಾತ್ಮಕ ಪ್ರಕ್ರಿಯೆ ಮತ್ತು ಜೂ.8ರಿಂದ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತೆ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸೂಚನೆ ನೀಡಿದ್ದಾರೆ. ಜೂನ್ ತಿಂಗಳನ್ನು ಸಂಪೂರ್ಣವಾಗಿ ಶೈಕ್ಷಣಿಕ ತಯಾರಿಗೆ ಬಳಸಿಕೊಂಡು ಮುಂದಿನ ದಿನಗಳ ಪರಿಸ್ಥಿತಿ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಕಾರದ ನಿರ್ದೇಶನದಂತೆ ಪಾಲನೆ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಜೂ.10ರಿಂದ 12ರವರೆಗೆ ಸಭೆಗಳನ್ನು ನಡೆಸಿ ಜುಲೈ.1ರಿಂದ ಅಧಿಕೃತವಾಗಿ ಶಾಲೆಗಳನ್ನು ಪುನಾರಂಭಿಸುವುದು ಸರಕಾರದ ಉದ್ದೇಶವಾಗಿದೆ.

ಪೋಷಕರು, ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ, ಶಾಲಾವೃದ್ಧಿ ಸದಸ್ಯರು, ಶಿಕ್ಷಣ ತಜ್ಞರು ಸಭೆಯಲ್ಲಿ ವ್ಯಕ್ತಪಡಿಸುವ ಅಭಿಪ್ರಾಯದ ಮೇಲೆ ಶಾಲೆಗಳ ಪುನಾರಂಭಿಸುವ ನಿರ್ಣಯ ಪ್ರಕಟವಾಗಲಿದೆ.

ಮೂರು ಚಿಂತನೆ: ಸಭೆಯಲ್ಲಿ ವಿವಿಧ ಮೂರು ಮಾದರಿಗಳನ್ನು ಚರ್ಚಿಸಲಾಗುತ್ತದೆ. ಮೊದಲನೆಯದಾಗಿ ಪ್ರಸ್ತುತ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಂದಿನಂತೆ ತರಗತಿಗಳನ್ನು ನಡೆಸುವುದು. 2ನೇ ಮಾದರಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಪದ್ಧತಿಯಲ್ಲಿ (ಬೆಳಗ್ಗೆ 8ರಿಂದ 12, ಮಧ್ಯಾಹ್ನ 1ರಿಂದ ಸಂಜೆ 5) ಶಾಲೆಗಳನ್ನು ನಡೆಸುವುದು.

ಮೂರನೆಯದಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಯ ಒಟ್ಟು ತರಗತಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ದಿನ ಬಿಟ್ಟು ದಿನ ಶಾಲೆಯನ್ನು ನಡೆಸುವುದು. (ಉದಾ- 1ರಿಂದ 5ನೇ ತರಗತಿ ಒಂದು ದಿನ, 6ರಿಂದ 10ನೇ ತರಗತಿ ಮತ್ತೊಂದು ದಿನ).

ಈ ಮೂರು ಮಾದರಿಗಳಲ್ಲಿ ಯಾವುದೇ ಮಾದರಿಯನ್ನು ಒಪ್ಪದಿದ್ದಲ್ಲಿ ಸಭೆಯು ಪ್ರಸ್ತಾಪಿಸುವ ಮಾದರಿಯನ್ನು ಅನುಸರಿಸಲಾಗುತ್ತದೆ. ಶಾಲೆಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಸಲಹೆ/ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ ಎಂದು ತಿಳಿದು ಬಂದಿದೆ.

ಜು.1ರಿಂದ ಶಾಲೆ ಆರಂಭ ಸಾಧ್ಯತೆ, ಕರಡು ವೇಳಾಪಟ್ಟಿ
ಜು.1ರಿಂದಲೇ ರಾಜ್ಯದಲ್ಲಿ ಶಾಲೆಗಳನ್ನು ಹಂತ ಹಂತವಾಗಿ ಪುನಾರಂಭಿಸುವುದಕ್ಕೆ ರಾಜ್ಯ ಸರಕಾರ ಕರಡು ವೇಳಾಪಟ್ಟಿ ಸಿದ್ಧಪಡಿಸಿದೆ. ಆ ಪ್ರಕಾರ, ಜು.1ರಂದು 4ರಿಂದ 7ನೆ ತರಗತಿ, ಜು.15ರಂದು 1ರಿಂದ 3 ಹಾಗೂ 8ರಿಂದ 10ನೇ ತರಗತಿ, ಜು.20ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಿದೆ.

ಈ ದಿನಾಂಕಗಳಂದು ಶಾಲೆಗಳನ್ನು ಆರಂಭಿಸಲು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಬಹುತೇಕ ಸದಸ್ಯರ ಅಭಿಪ್ರಾಯ ಈ ಮೇಲಿನ ದಿನಾಂಕಗಳಿಗೆ ಪೂರಕವಾಗಿದ್ದಲ್ಲಿ ಮಾತ್ರ ಶಾಲೆಗಳನ್ನು ಪುನಾರಂಭ ಮಾಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಕೇಂದ್ರ ಸರಕಾರದ ಗೃಹ ಮಂತ್ರಾಲಯವು ಕೊರೋನ ನಿಯಂತ್ರಣಕ್ಕೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳನ್ನು ಕುರಿತು ಸೋಮವಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನಾರಂಭಿಸುವುದಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರೊಂದಿಗೆ ಸಭೆಗಳನ್ನು ಪ್ರತಿ ಶಾಲಾ ಮಟ್ಟದಲ್ಲಿ ಆಯೋಜಿಸುವಂತೆ ತೀರ್ಮಾನಿಸಲಾಗಿದೆ.
-ಸುರೇಶ್ ಕುಮಾರ್, ಶಿಕ್ಷಣ ಸಚಿವ 

ಪೋಷಕರಲ್ಲಿ ಗೊಂದಲ...!
ಜೂನ್ 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಹಾಗೂ ಜೂ.25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಮಾತ್ರ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಹತ್ತಾರು ರೀತಿಯಲ್ಲಿ ಚಿಂತನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News