ಕೊರೋನ ನಿಯಂತ್ರಿಸುವಲ್ಲಿ ಬಿಜೆಪಿ ವಿವೇಚನೆ ಬಳಸಿಲ್ಲ: ಪ್ರಿಯಾಂಕ್ ಖರ್ಗೆ

Update: 2020-06-02 17:39 GMT

ಕಲಬುರಗಿ, ಜೂ.2: ಕರ್ನಾಟಕವನ್ನು ಒಳಗೊಂಡಂತೆ ದೇಶದಲ್ಲಿ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ವಿವೇಚನೆಯಿಂದ ನಡೆದುಕೊಂಡಿಲ್ಲವೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಕೋವಿಡ್-19 ನಿಯಂತ್ರಿಸುವಲ್ಲಿ ಪ್ರತಿಪಕ್ಷಗಳನ್ನು ಒಳಗೊಂಡಂತೆ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ತಮ್ಮ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸೋಂಕು ಮತ್ತಷ್ಟು ಹೆಚ್ಚಾಗಲು ಕಾರಣರಾಗಿದ್ದಾರೆಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೋಟು ರದ್ದು ಮಾಡಿ, ಜಿಎಸ್‍ಟಿ ಜಾರಿಗೆ ತರುವುದರ ಮೂಲಕ ಜನತೆಯನ್ನು ಸಮಸ್ಯೆಗೆ ಸಿಲುಕಿಸಿದ್ದರು. ಅದರಿಂದ ಹೊರಬರುವಷ್ಟರಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಕೋವಿಡ್-19 ಲಾಕ್‍ಡೌನ್ ಘೋಷಿಸಿ ದೇಶದ ಜನತೆಯನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದ್ದಾರೆಂದು ಅವರು ಟೀಕಿಸಿದ್ದಾರೆ.

ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ವಂದೇ ಭಾರತ ಕಾರ್ಯಕ್ರಮ ಹಮ್ಮಿಕೊಂಡ ಪ್ರಧಾನಿ ಮೋದಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದೇಶವನ್ನು ಕಟ್ಟಲು ಹಗಲಿರುಳು ಶ್ರಮಿಸಿದ ವಲಸೆ ಕಾರ್ಮಿಕರನ್ನು ಅವರ ರಾಜ್ಯ, ಜಿಲ್ಲೆಗಳಿಗೆ ತಲುಪಿಸಲು ಯಾಕೆ ಯಾವ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸೇವಾಸಿಂಧು ಆ್ಯಪ್ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿರುವ ಲಕ್ಷಾಂತರ ಕುಟುಂಬಗಳು ಇನ್ನು ರಾಜ್ಯಕ್ಕೆ ಬರಬೇಕಿದೆ. ಇವರನ್ನು ಕರೆತರುವಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News