ಜನರ ನಡುವೆ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಅಶೋಕ್ ಸೂಚನೆ

Update: 2020-06-02 17:42 GMT

ಬೆಂಗಳೂರು, ಜೂ.2: ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಮುಂದಿನ ದಿನಗಳಲ್ಲಿ ಕಚೇರಿ ಬಿಟ್ಟು ಗ್ರಾಮಗಳಿಗೆ ತೆರಳಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಕಚೇರಿಯಲ್ಲಿದ್ದು ಕೆಲಸ ಮಾಡಿದರೆ ಸಾಕಾಗುವುದಿಲ್ಲ. ಗ್ರಾಮ ಗ್ರಾಮಗಳಲ್ಲಿ ಕೋವಿಡ್-19 ನಿಯಂತ್ರಣದ ಬಗ್ಗೆ ಪರಿಣಾಮಕಾರಿಯಾಗಿ ಜನ ಜಾಗೃತಿ ಮೂಡಬೇಕಾದರೆ ನಮ್ಮ ಕಚೇರಿ ಬಿಟ್ಟು ಹಳ್ಳಿ ಕಡೆ ಧಾವಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಸಹಭಾಗಿತ್ವದಲ್ಲಿ ಇದು ನಡೆಯಬೇಕು. ಇನ್ನು ಮುಂದೆ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದಿಂದ ಬರುವವರ ಮೇಲೆ ವಿಶೇಷ ನಿಗಾವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬಹುತೇಕ ಪ್ರಕರಣಗಳು ಮಹಾರಾಷ್ಟ್ರದ ಸಂಪರ್ಕ ಹೊಂದಿರುವುದು ವೈದ್ಯಕೀಯ ತಪಾಸಣೆಯಲ್ಲಿ ಸಾಬೀತಾಗಿದೆ. ಹೀಗಾಗಿ, ಆ ರಾಜ್ಯದಿಂದ ಬರುವವರ ಮೇಲೆ ವಿಶೇಷ ನಿಗಾವಹಿಸಲು ಸೂಚಿಸಲಾಗಿದೆ. ಈವರೆಗೂ ಹೊರ ರಾಜ್ಯದಿಂದ ಬಂದವರು 7 ದಿನ ಮಾತ್ರ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಇನ್ನು ಮುಂದೆ ಮಹಾರಾಷ್ಟ್ರದಿಂದ ಬಂದವರು 14 ದಿನಗಳ ಕ್ವಾರಂಟೈನ್‍ಗೊಳಗಾಗಲೇಬೇಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News