ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ 50 ಸಜೀವ ಗುಂಡುಗಳು: ತನಿಖೆಗೆ ಎಸ್ಪಿ ಆದೇಶ

Update: 2020-06-02 18:20 GMT

ಮೈಸೂರು,ಜೂ.2: ಜಿಲ್ಲೆಯ ತಿ.ನರಸೀಪುರ ಪಟ್ಟಣ ಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದು ತನಿಖೆಗೆ ಎಸ್ಪಿ ರಿಷ್ಯಂತ್ ಸಿ.ಬಿ. ಆದೇಶಿಸಿದ್ದಾರೆ.

ಈ ಕುರಿತು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ ರಾತ್ರಿ ಗಸ್ತು ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ರಕ್ಷಣೆಗಾಗಿ ಬಳಸಲು ನೀಡಿದ್ದ ಸಜೀವ ಗುಂಡುಗಳಲ್ಲಿ 50ಗುಂಡುಗಳು ಕಾಣೆಯಾಗಿದ್ದು ಈಗ ಇದರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಗುಂಡು ವಶದಲ್ಲಿಟ್ಟುಕೊಂಡು ಸರಿಯಾದ ಲೆಕ್ಕ ಇಡಬೇಕಾಗಿದ್ದ ಠಾಣೆಯ ರೈಟರ್ ಕೃಷ್ಣೇಗೌಡ ಅವರ ವಿರುದ್ಧ ನಿರ್ಲಕ್ಷ್ಯ ಸಶಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಸಜೀವ ಗುಂಡುಗಳು ನಾಪತ್ತೆಯಾಗಿರುವ ಪ್ರಕರಣ ಅತ್ಯಂತ ಗಂಭೀರವಾಗಿರುವುದರಿಂದ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿ ಸಿ.ಬಿ.ರಿಷ್ಯಂತ್ ಅವರು ತಿ.ನರಸೀಪುರ ಠಾಣೆಗೆ ಭೇಟಿ ನೀಡಿ ರೈಟರ್ ಕೃಷ್ಣೇಗೌಡ, ಸಬ್ ಇನ್ಸಪೆಕ್ಟರ್ ಲವ ಸೇರಿದಂತೆ ಇತರರನ್ನು ವಿಚಾರಣೆಗೆ ಒಳಪಡಿಸಿದರು.

ಸಾರ್ವಜನಿಕರಿಗೆ ರಕ್ಷಣೆ ನೀಡಿ ಕಾನೂನು ಸುವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರತಿ ಠಾಣೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಬಂದೂಕು, ಸಜೀವ ಗುಂಡುಗಳನ್ನು ನೀಡಲಾಗುತ್ತದೆ. ರಾತ್ರಿ ಗಸ್ತಿನ ವೇಳೆ ಕರ್ತವ್ಯಕ್ಕೆ ತೆರಳುವ ಪೊಲೀಸರು ಠಾಣೆಯಲ್ಲಿ ಬಂದೂಕು, ಸಜೀವ ಗುಂಡುಗಳನ್ನು ತಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗಿ ಕರ್ತವ್ಯ ಮುಗಿದ ಬಳಿಕ ಮರಳಿ ಠಾಣೆಯಲ್ಲಿ ತಂದಿರಿಸಬೇಕು. ಹೀಗೆ ತೆಗೆದುಕೊಂಡು ಹೋಗುವಾಗ ಮತ್ತು ಇಡುವಾಗ ಅದನ್ನು ರೈಟರ್ ಬಳಿ ಇರುವ ಪುಸ್ತಕದಲ್ಲಿ ನಮೂದಿಸಬೇಕು. ಆದರೆ ತಿ.ನರಸೀಪುರ ಠಾಣೆಯಲ್ಲಿ ಹೀಗೆ ತೆಗೆದುಕೊಂಡು ಹೋದ ಗುಂಡುಗಳಲ್ಲಿ ಮ್ಯಾಗ್ ಜೀನ್ ನಲ್ಲಿದ್ದ 50ಗುಂಡುಗಳು ಕಾಣೆಯಾಗಿವೆ. ಬಂದೂಕು ಗುಂಡುಗಳ ತಪಾಸಣೆ ವೇಳೆ ಇರುವ ಗುಂಡುಗಳಿಗೂ, ಪುಸ್ತಕದಲ್ಲಿ ದಾಖಲಾಗಿರುವ ಗುಂಡುಗಳಿಗೂ ತಾಳೆಯಾಗದೆ  ಇರುವುದರಿಂದ ಠಾಣೆ ಮಟ್ಟದಲ್ಲಿಯೇ ವಿಚಾರಣೆ ನಡೆಸಿದ ಬಳಿಕ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಠಾಣೆಯನ್ನು ಹಾಗೂ ಅಲ್ಲಿನ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರೂ ಪತ್ತೆಯಾಗದ ಕಾರಣ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ ಅವರಿಂದ ತನಿಖೆಗೆ ನಡೆಸುವಂತೆ ಎಸ್ಪಿ ಸಿ.ಬಿ.ರಿಷ್ಯಂತ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News