ಮರೀಚಿಕೆಯಾದ ರಸ್ತೆ ಸಂಪರ್ಕ ಸೌಲಭ್ಯ: ಮಹಿಳೆಯ ಮೃತದೇಹವನ್ನು ಕೋಲಿಗೆ ಕಟ್ಟಿ ಹೊತ್ತು ಸಾಗಿದ ಕುಟುಂಬಸ್ಥರು

Update: 2020-06-02 18:34 GMT

ಚಿಕ್ಕಮಗಳೂರು, ಜೂ.2: ಆಧುನಿಕ ಕಾಲದಲ್ಲೂ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿರುವ ಕಾಫಿನಾಡಿನ ಕುಗ್ರಾಮವೊಂದರಲ್ಲಿ ರಸ್ತೆ, ಸೇತುವೆಯ ಸೌಲಭ್ಯಗಳ ಕೊರತೆಯಿಂದಾಗಿ ಮೃತದೇಹವೊಂದನ್ನು ಕೋಲಿಗೆ ಕಟ್ಟಿಕೊಂಡು ಸಾಗಿಸಿದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲಿರುವ ಕಳಕೋಡು ಮೇಗಲಮಕ್ಕಿ ಸಮೀಪದ ಮನುಕುಂಬ್ರಿ ಎಂಬ ಗಿರಿಜನರೇ ವಾಸವಿರುವ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಕಳಸ ಪಟ್ಟಣದಿಂದ ಸುಮಾರು 15 ಕಿಮೀ ದೂರವಿರುವ ಈ ಗಿರಿಜನರ ಹಾಡಿಯಲ್ಲಿ ಸುಮಾರು 50 ವರ್ಷದ ಶಾರದಮ್ಮ ಎಂಬ ಮಹಿಳೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗ್ರಾಮಕ್ಕೆ ಹಿಂದಿನಿಂದಲೂ ಯಾವುದೇ ರಸ್ತೆ ಸಂಪರ್ಕ ಇಲ್ಲದ ಪರಿಣಾಮ ಯಾವುದೇ ವಾಹನಗಳು ಬರಲು ಸಾಧ್ಯವಿರದ ಕಾರಣ ಶಾರದಮ್ಮ ಅವರ ಕುಟುಂಬಸ್ಥರು ಮಹಿಳೆಯನ್ನು ಕಂಬಳಿಯಲ್ಲಿ ಸುತ್ತಿಕೊಂಡು ಕೋಲಿಗೆ ಹಗ್ಗದಲ್ಲಿ ಕಟ್ಟಿ ಹೊತ್ತುಕೊಂಡು ಬಂದು ಕಳಸ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.

ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಪರಿಣಾಮ ಮಂಗಳವಾರ ಸಂಜೆ ವೇಳೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು ಕಳಸ ಪಟ್ಟಣದಿಂದ ಕಳಸಕೋಡು ಗ್ರಾಮದವರೆಗೆ ಆಂಬುಲೆನ್ಸ್ ನಲ್ಲಿ ಶವವನ್ನು ಕೊಂಡೊಯ್ದ ಕುಟುಂಬಸ್ಥರು ಕಳಕೋಡು ಗ್ರಾಮದಿಂದ ಮಹಿಳೆಯ ಶವವನ್ನು ಕಂಬಳಿಯಲ್ಲಿ ಸುತ್ತಿ ಕಂಬಕ್ಕೆ ಕಟ್ಟಿಕೊಂಡು ಮನುಕುಂಬ್ರಿ ಗ್ರಾಮಕ್ಕೆ ಹೊತ್ತು ಸಾಗಿಸಿದ್ದಾರೆಂದು ತಿಳಿದು ಬಂದಿದೆ.

ಮನುಕುಂಬ್ರಿ ಗ್ರಾಮದಲ್ಲಿನ ಗಿರಿಜನ ಹಾಡಿ ಕಳೆದ ಅನೇಕ ವರ್ಷಗಳಿಂದ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದ್ದು, ಈ ಗ್ರಾಮಕ್ಕೆ ರಸ್ತೆಯಂತಹ ನಾಗರಿಕ ಸೌಲಭ್ಯಗಳು ಇನ್ನೂ ಮರಿಚೀಕೆಯಾಗಿದೆ. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ನಿವಾಸಿಗಳು ಅನೇಕ ಬಾರಿ ಸಂಬಂಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಇದುವರೆಗೂ ರಸ್ತೆ ಸಂಪರ್ಕದ ಭಾಗ್ಯ ಈ ಗ್ರಾಮದ ಜನರಿಗೆ ಧಕ್ಕಿಲ್ಲ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಕೋಲಿಗೆ ಕಟ್ಟಿಕೊಂಡು ಹೊತ್ತು ಸಾಗಿದ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಈ ಭಾಗದ ಶಾಸಕರು, ಸಚಿವರು, ಜನಪ್ರತನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಧುನಿಕ ಕಾಲದಲ್ಲಿ ಮನುಷ್ಯ ಚಂದ್ರನ ಮೇಲೆ ಕಾಲಿಡುವಂತಹ ತಂತ್ರಜ್ಞಾನದ ಪ್ರಗತಿಯಾಗಿದ್ದರೂ ಆದಿವಾಸಿಗಳು ವಾಸಿಸುವ ಕುಗ್ರಾಮಗಳಿಗೆ ರಸ್ತೆಯಂತಹ ಮೂಲಸೌಕರ್ಯಗಳನ್ನು ಕಲ್ಪಿಸದ ಸರಕಾರಗಳಿಗೆ ಈ ಘಟನೆ ನಿಜಕ್ಕೂ ತಲೆತಗ್ಗಿಸುವಂತಹ ವಿಚಾರವಾಗಿದೆ ಎಂದು ಜಿಲ್ಲೆಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News