ಬಿಎಸ್‌ವೈ ಹೆಸರಿಗೆ ಮಾತ್ರ; ಅಸಂವಿಧಾನಾತ್ಮಕ ಸಿಎಂ ಆಗಿ ವಿಜಯೇಂದ್ರ ಇದ್ದಾರೆ: ಸಿದ್ದರಾಮಯ್ಯ

Update: 2020-06-03 11:39 GMT

ಬೆಂಗಳೂರು, ಜೂ. 3: ಬಿ.ಎಸ್.ಯಡಿಯೂರಪ್ಪ ಹೆಸರಿಗಷ್ಟೇ ಮುಖ್ಯಮಂತ್ರಿ. ಅವರ ಪುತ್ರ ವಿಜಯೇಂದ್ರ ಎಲ್ಲದಕ್ಕೂ ಸಹಿ ಮಾಡುವುದು. ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆಂದು ರಾಜ್ಯದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಸಮಾಧಾನಿತ ಬಿಜೆಪಿ ಶಾಸಕರು ಸಾಕಷ್ಟು ಮಂದಿ ನನ್ನನ್ನು ಭೇಟಿ ಮಾಡಿದ್ದು, ಅವರೆಲ್ಲರೂ ಸಹಜವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಬಿಜೆಪಿ ಆಂತರಿಕ ವಿಚಾರಗಳ ಬಗ್ಗೆ ನಾವು ಕೈಹಾಕಲು ಹೋಗುವುದಿಲ್ಲ. ಆದರೆ, ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯ ಎಂದು ಹೇಳಿದರು.

ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಇನ್ನೂ ಮುಂದುವರಿಯಲಿದೆ. ಈ ವಿಚಾರದಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ಒಂದು ವೇಳೆ ಬಿಜೆಪಿಯ ಆಂತರಿಕ ಕಿತ್ತಾಟದಿಂದ ಸರಕಾರ ಅದರಷ್ಟಕ್ಕೇ ಪತನಗೊಂಡರೆ ನಾವು ಜವಾಬ್ದಾರರಲ್ಲ ಎಂದು ಸಿದ್ದರಾಮಯ್ಯ, ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಆರ್ಥಿಕವಾಗಿ ದಿವಾಳಿ: 'ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಿದ್ದರಾಮಯ್ಯ ಹಾಳು ಮಾಡಿದ್ದಾರೆ' ಎಂಬ ಸಚಿವ ವಿ.ಸೋಮಣ್ಣ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರಕಾರ ಮೊದಲನೆ ಸ್ಥಾನದಲ್ಲಿತ್ತು. ಸೋಮಣ್ಣ ರಾಜಕೀಯಕ್ಕಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರೇನು ಆರ್ಥಿಕ ತಜ್ಞರಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ಹಣವಿಲ್ಲದ ಸ್ಥಿತಿ ಎದುರಾಗಿದೆ. ನೋಟು ರದ್ದತಿ ಮತ್ತು ಜಿಎಸ್ಪಿ ಜಾರಿಯಿಂದ ಅರ್ಥವ್ಯವಸ್ಥೆ ಕೆಟ್ಟಿದೆ. ಕೊರೋನ ಸೋಂಕು ಬರುವ ಮೊದಲೇ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು ಎಂದು ದೂರಿದ ಅವರು, ಬಿಜೆಪಿಯವರಂತೆ ನಾನು ಕೆಳಮಟ್ಟಕ್ಕೆ ಇಳಿಯುವುದಿಲ್ಲ ಎಂದು ನುಡಿದರು.

ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಅತ್ಯುತ್ತಮ ಬಾಂಧವ್ಯ ಇದೆ. ನಮ್ಮ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಬಿಜೆಪಿ ಮುಖಂಡರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜಕೀಯ ಕಾರಣಕ್ಕಾಗಿ ನಮ್ಮ ನಡುವೆ ಸಂಬಂಧ ಸರಿಯಾಗಿಲ್ಲ ಎಂದು ಬಿಜೆಪಿ ಮುಖಂಡರು ಆಪಾದನೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೋರ್ಟ್‍ಗೆ ಹೋಗ್ತೀವಿ: ಕೊರೋನ ಸೋಂಕಿನ ನೆಪದಲ್ಲಿ ರಾಜ್ಯ ಸರಕಾರ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಹೊರಟಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಈ ಸಂಬಂಧ ಕೋರ್ಟ್ ಮೆಟ್ಟಲೇರಲು ಪಕ್ಷ ತೀರ್ಮಾನಿಸಿದ್ದು, ಅಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.

ಕೊಪ್ಪಳದಲ್ಲಿ ಪ್ರಗತಿಪರರ ಮೇಲೆ ಕೇಸು ಹಾಕಿರುವುದನ್ನು ನಾನು ಖಂಡಿಸುತ್ತೇನೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಯಾವ ಸರಕಾರವೂ ಈ ರೀತಿ ಮಾಡುವುದಿಲ್ಲ. ಜನರ ಧ್ವನಿಯನ್ನು ಹತ್ತಿಕ್ಕುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಸರಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News