ಮಹಾಮಳೆ ಆತಂಕ: ಮನೆ ಖಾಲಿ ಮಾಡುತ್ತಿರುವ ಮಡಿಕೇರಿಯ ಬೆಟ್ಟ, ಗುಡ್ಡದ ನಿವಾಸಿಗಳು

Update: 2020-06-03 11:51 GMT

ಮಡಿಕೇರಿ, ಜೂ.3: ಮುಂಗಾರು ಆರಂಭವಾಗುತ್ತಿರುವಂತ್ತೆಯೇ ಮಡಿಕೇರಿ ನಗರದ ಬೆಟ್ಟ, ಗುಡ್ಡಗಳ ಮೇಲೆ ವಾಸ ಮಾಡುತ್ತಿರುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಅಪಾಯದ ಮುನ್ಸೂಚನೆಯಿಂದ ಇಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ ಸ್ಥಳಾಂತರಗೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಮಹಾಮಳೆಯ ಆರ್ಭಟ ನಗರದ ವಿವಿಧ ಬಡಾವಣೆಗಳ ನಿವಾಸಿಗಳನ್ನು ಕೂಡ ಸಂಕಷ್ಟಕ್ಕೆ ದೂಡಿತ್ತು. ಬೆಟ್ಟ, ಗುಡ್ಡಗಳಿಂದ ಕೂಡಿರುವ ಇಂದಿರಾನಗರ, ಚಾಮುಂಡೇಶ್ವರಿ ನಗರ ಮತ್ತು ಮಂಗಳಾದೇವಿ ನಗರದದಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಹಾನಿ ಸಂಭವಿಸುತ್ತಲೇ ಇದೆ. 2018 ಮತ್ತು 2019 ರಲ್ಲಿ ಹತ್ತಾರು ಮನೆಗಳು ಬೆಟ್ಟದಿಂದ ಜಾರಿ ಹೋಗಿ ನೆಲಸಮವಾಗಿದ್ದವು. ಅನೇಕ ಕುಟುಂಬಗಳು ಆಶ್ರಯವಿಲ್ಲದೆ ಬೀದಿಗೆ ಬಿದ್ದ ಘಟನೆಗಳೂ ನಡೆದಿದ್ದವು.

ಇದೀಗ ಮತ್ತೆ ಮಳೆಗಾಲ ಆರಂಭವಾಗಿರುವುದರಿಂದ ಜೀವವಾದರೂ ಉಳಿದುಕೊಳ್ಳಲಿ ಎಂದು ಇಲ್ಲಿನ ಹಲವು ಕುಟುಂಬಗಳು ಅಗತ್ಯ ವಸ್ತುಗಳೊಂದಿಗೆ ಮನೆಗಳನ್ನು ಖಾಲಿ ಮಾಡುತ್ತಿವೆ. ಕೆಲವರು ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆಯಲು ತೆರಳಿದರೆ, ಉಳಿದವರು ತಮ್ಮ ತಮ್ಮ ನೆಂಟರಿಸ್ಟರ ಮನೆ ಕಡೆ ಮುಖ ಮಾಡಿದ್ದಾರೆ.

‘ಮಳೆಗಾಲ ಕಳೆದು ಮನೆಗಳು ಉಳಿದುಕೊಂಡರೆ ಮರಳಿ ಬರುತ್ತೇವೆ, ಇಲ್ಲದಿದ್ದರೆ ಆ ದೇವರೇ ಗತಿ ಎಂದು’ ಬಡ ಕುಟುಂಬಗಳು ಅಸಹಾಯಕತೆ ವ್ಯಕ್ತಪಡಿಸಿವೆ. 

ಈಗಾಗಲೇ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆಯನ್ನು ನೀಡಿದೆ. ಅಲ್ಲದೆ ನಗರಸಭೆ ಕೂಡ ಅಪಾಯದಂಚಿನ ಮನೆಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News