ವ್ಯಾಪಾರ ಆರಂಭಕ್ಕೆ ಸಿಗದ ಅವಕಾಶ: ನಿರಾಶೆಯಲ್ಲಿ ಹೋಟೆಲ್, ಮಾಲ್‍ ಗಳ ಮಾಲಕರು

Update: 2020-06-03 12:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.3: ಕೊರೋನ ವೈರಾಣು ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಸರಕಾರಗಳು ನಾಲ್ಕು ಹಂತದಲ್ಲಿ ಲಾಕ್‍ಡೌನ್ ಘೋಷಿಸಿತ್ತು. ಇದೀಗ ನಾಲ್ಕನೇ ಹಂತದ ಲಾಕ್‍ಡೌನ್ ಮುಗಿದು, ಜೂ.1 ರಿಂದ ಐದನೇ ಹಂತದ ಲಾಕ್‍ಡೌನ್ ಘೋಷಿಸಲಾಗಿದೆ. ಈ ವೇಳೆ ತಮ್ಮ ವ್ಯಾಪಾರ ವಹಿವಾಟು ಆರಂಭಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್ ಹಾಗೂ ಮಾಲ್‍ಗಳ ಮಾಲಕರಿಗೆ ನಿರಾಸೆಯುಂಟಾಗಿದೆ.

ಕೇಂದ್ರ ಸರಕಾರವು ಜೂ.8 ರಿಂದ ಅನುಮತಿ ನೀಡುವುದಾಗಿ ಹೇಳಿದೆ. ಆದರೆ, ವಾಸ್ತವವಾಗಿ ಯಾವಾಗಿನಿಂದ ಅನುಮತಿ ಸಿಗಬಹುದು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರಿಂದಾಗಿ ರೆಸ್ಟೋರೆಂಟ್, ಹೋಟೆಲ್ ಮಾಲಕರು ದಿನವೂ ವ್ಯಾಪಾರ ವಹಿವಾಟು ಆರಂಭಕ್ಕಾಗಿ ಕಾಯುವಂತಾಗಿದೆ.

ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಹೋಟೆಲ್, ರೆಸ್ಟೋರೆಂಟ್, ಮಾಲ್ ಆರಂಭಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅನುಮತಿ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಎರಡು ವಾರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕಿತ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸರಕಾರ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಅನುಮತಿ ನೀಡಲು ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ, ಸೋಮವಾರ-ಮಂಗಳವಾರದಿಂದಲೇ ವ್ಯಾಪಾರ ವಹಿವಾಟು ಆರಂಭಿಸಲು ಸಿದ್ಧತೆ  ನಡೆಸಿದ್ದವರಿಗೆ ನಿರಾಸೆಯಾಗಿದೆ. ಆದರೆ, ಹೋಟೆಲ್, ರೆಸ್ಟೋರೆಂಟ್, ಮಾಲ್ ಮಾಲಕರಿಗೆ ಜೂ.8 ರಿಂದ ಪಾಲನೆ ಮಾಡಬೇಕಾದ ಕ್ರಮಗಳ ಬಗ್ಗೆ ಬಿಬಿಎಂಪಿ, ಆರೋಗ್ಯ ಇಲಾಖೆ ಸೇರಿ ಸಂಬಂಧ ಪಟ್ಟ ಇಲಾಖೆಗಳು ಜೂ.1 ರಿಂದಲೇ ನಿಯಮಾವಳಿ ಗಳನ್ನು ಹೊರಡಿಸಲಿದೆ. ಕೆಲವೊಂದು ಸುರಕ್ಷತಾಕ್ರಮ ಪಾಲನೆ ಸಂಬಂಧ ದೃಢೀಕರಣ ಪತ್ರ ಸಲ್ಲಿಸಬೇಕಾಗಿದೆ ಎಂದು ಹೇಳಲಾಗಿದೆ.

ವರದಿ ಆಧಾರದ ಮೇಲೆ ತೀರ್ಮಾನ: ಬೆಂಗಳೂರಿನಲ್ಲಿ ಲಾಕ್‍ಡೌನ್ ಐದನೇ ಹಂತದ ಜಾರಿ ಸಂಬಂಧ ನಗರ ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರಿಗೆ ಪ್ರತ್ಯೇಕ ನಿರ್ದೇಶನಗಳನ್ನು ನೀಡಲಾಗಿದೆ. ರಾತ್ರಿ ಕರ್ಫ್ಯೂ 9 ರಿಂದ ಮುಂಜಾನೆ 5 ಗಂಟೆವರೆಗೂ ನಿಗದಿಯಾಗಿರುವುದರಿಂದ ಯಾವ್ಯಾವ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಬಹುದು ಎಂಬುದು ಇವರ ವರದಿ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News