ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ವಿಚಾರ: ಶಿಕ್ಷಣ ಸಚಿವರಿಗೆ ಪತ್ರ ಬರೆದ ಶಾಸಕ ತನ್ವೀರ್ ಸೇಠ್

Update: 2020-06-03 13:03 GMT

ಬೆಂಗಳೂರು, ಜೂ.3: ರಾಜ್ಯದಲ್ಲಿ ಶಾಲೆಗಳನ್ನು ಜುಲೈ 1ರಿಂದ ಹಂತ ಹಂತವಾಗಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ ಹಿನ್ನೆಲೆಯಲ್ಲಿ ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗೆ ಶಾಸಕ ತನ್ವೀರ್ ಸೇಠ್ ಬುಧವಾರ ಪತ್ರ ಬರೆದಿದ್ದಾರೆ.

ಶಾಲೆಗಳು ಪ್ರಾರಂಭವಾದಲ್ಲಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಹಜವಾಗಿ ಬೆರೆಯುವುದು, ಆಟೋಟಗಳಲ್ಲಿ ಭಾಗವಹಿಸುವುದು, ಶೌಚಾಲಯ ಕುಡಿಯುವ ನೀರು ಇವುಗಳನ್ನು ಮುಕ್ತವಾಗಿ ಉಪಯೋಗಿಸುವುದನ್ನು ತಡೆಯಲಾಗದು. ಯಾವುದೇ ಒಬ್ಬ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಸಾಮಾನ್ಯ ಶೀತ, ಜ್ವರ ಅಥವಾ ಫ್ಲೂನಂತಹ ಬಾಧೆಗೆ ಒಳಗಾದರೂ ಎಲ್ಲ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಅನಾವಶ್ಯಕ ಆತಂಕ ಉಂಟು ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಇಂತಹ ಪ್ರಸಂಗ ಉಂಟಾದಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ತಪಾಸಣೆಗೆ ಒಳಪಡಿಸುವ ತುರ್ತು ವ್ಯವಸ್ಥೆಯೂ ಪ್ರಸ್ತುತ ಲಭ್ಯವಿಲ್ಲ ಎಂಬುದೂ ನಮಗೆ ಅರಿಯದ ವಿಷಯವೇನಲ್ಲ ಎಂದು ತನ್ವೀರ್ ಸೇಠ್ ತಿಳಿಸಿದ್ದಾರೆ.

ರಾಜ್ಯದ ಅನೇಕ ಸರಕಾರಿ ಶಾಲಾ ಕಟ್ಟಡ ಮತ್ತು ಕೆಲವು ಖಾಸಗಿ ಶಾಲಾ ಕಟ್ಟಡಗಳನ್ನು ಕ್ವಾರಂಟೈನ್ ಸೆಂಟರ್ ಗಳಾಗಿ ಪರಿವರ್ತನೆ ಮಾಡಿರುವುದರಿಂದ ಇಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಪ್ರಾರಂಭಿಸಿ ತರಗತಿಗಳನ್ನು ನಡೆಸಲು ಸಾಧ್ಯ ಇರುವುದಿಲ್ಲ. ಅನೇಕ ಪ್ರದೇಶಗಳಲ್ಲಿ ಮಕ್ಕಳ ಕುಟುಂಬಸ್ಥರು ವಲಸೆ ಹೋಗಿರುವುದರಿಂದ ಶಾಲೆಗಳಿಗೆ ಕೂಡಲೇ ಹಿಂದಿರುಗುವುದು ಕಷ್ಟ ಸಾಧ್ಯ. ಇದರಿಂದ ವಲಸೆ ಹೋಗಿರುವ ಮಕ್ಕಳು ಶಾಲೆಗಳಿಂದ ಹೊರಗೆ ಉಳಿಯುವ ಸಾಧ್ಯತೆಗಳು ಇರುತ್ತವೆ.

ರಾಜ್ಯದ ಗಡಿ ಪ್ರದೇಶದಲ್ಲಿರುವ ಶಾಲೆಗಳ ಮಕ್ಕಳು ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಂದ ನಮ್ಮ ರಾಜ್ಯದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಸಂಚಾರದ ನಿರ್ಬಂಧಗಳು ಹಾಗೂ ಸಂಚಾರದ ಸೂಕ್ತ ವ್ಯವಸ್ಥೆಗಳು ಇಲ್ಲದೆ ಈ ಮಕ್ಕಳು ಶಾಲೆಗಳಿಗೆ ಬರುವುದು ಕಷ್ಟ ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಅನೇಕ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತವಾದ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಶಾಲೆಯ ಆಸುಪಾಸಿನಲ್ಲಿ ವಿದ್ಯಾರ್ಥಿಗಳಿಂದ ಅನಿವಾರ್ಯವಾಗಿ ತೆರೆದ ಪ್ರದೇಶದಲ್ಲಿ ಮಲವಿಸರ್ಜನೆಯಿಂದ ವಾತಾವರಣ ಕಲುಷಿತಗೊಳ್ಳುವ ಸಾಧ್ಯತೆಗಳು ಇರುತ್ತದೆ ಎಂದು ತನ್ವೀರ್ ಸೇಠ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬಹುತೇಕ ಶಾಲಾ, ಕಾಲೇಜುಗಳ ಮಕ್ಕಳು ಶಾಲಾ ಕಾಲೇಜುಗಳಿಗೆ, ಶಾಲಾ ವಾಹನ ಮತ್ತು ಇತರೆ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದು, ಪ್ರಸ್ತುತ ಸರಕಾರದ ಸುರಕ್ಷಿತ ಅಂತರ ಮತ್ತು ಸೀಮಿತ ಪ್ರಯಾಣಿಕರ ನಿಯಮಾವಳಿಗಳ ಪ್ರಕಾರ ವಿವಿಧ ವಾಹನಗಳಲ್ಲಿ ವಿದ್ಯಾರ್ಥಿಗಳು ಸಂಚರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲ ಪೋಷಕರಿಗೆ ಮತ್ತು ವಿದ್ಯಾರ್ಥಿಗಳ ಆತಂಕ ಹೆಚ್ಚಿಸುತ್ತದೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಲ್ಲಿ ಇಂತಹ ಪ್ರದೇಶಗಳ ವಿದ್ಯಾರ್ಥಿಗಳ ಪಾಠ-ಪ್ರವಚನಗಳಿಗೆ ಸಹಜವಾಗಿ ಧಕ್ಕೆಯಾಗುತ್ತದೆ. ಆತಂಕ ಮತ್ತು ಭಯದ ವಾತಾವರಣದಲ್ಲಿ ಶಾಲೆಗಳನ್ನು ನಡೆಸಿದ್ದಲ್ಲಿ ವಿದ್ಯಾರ್ಥಿಗಳು ನಿರಾತಂಕವಾಗಿ ತರಗತಿಗಳಲ್ಲಿ ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ರಾಜ್ಯದ ಎಲ್ಲ ಶಾಲೆಗಳ ಮೇಲುಸ್ತುವಾರಿ ಸಮಿತಿ, ಪಾಲುದಾರರು, ಖಾಸಗಿ ಆಡಳಿತ ಮಂಡಳಿ ಮತ್ತು ಇತರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಇದನ್ನು ಕ್ರೋಢೀಕರಿಸಿ ವೈಜ್ಞಾನಿಕ ಮತ್ತು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಾಧ್ಯ ಇರುವುದಿಲ್ಲ. ಇದರ ಬದಲಾಗಿ ನುರಿತ ಮನೋವೈದ್ಯ, ಶಿಕ್ಷಣ ತಜ್ಞರು,ಸಾರಿಗೆ ತಜ್ಞರು, ಕೋವಿಡ್-19ರ ಸಂಶೋಧಕರು, ಪೋಷಕರ ಪ್ರತಿನಿಧಿ, ವಿದ್ಯಾರ್ಥಿಗಳ ಪ್ರತಿನಿಧಿ ಮತ್ತು ಇನ್ನಿತರ ತಜ್ಞರು ಒಳಗೊಂಡ ಸಮಿತಿಯನ್ನು ರಚನೆ ಮಾಡಿ ಸಮಗ್ರವಾದ ವರದಿ ಪಡೆಯಬೇಕು ಎಂದು ತನ್ವೀರ್ ಸೇಠ್ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News