ರಾಜ್ಯದಲ್ಲಿ 4 ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ: ಸಾವಿನ ಸಂಖ್ಯೆ 53ಕ್ಕೆ ಏರಿಕೆ

Update: 2020-06-03 13:58 GMT

ಬೆಂಗಳೂರು, ಜೂ.3: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 267 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೊರೋನದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 53ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆವರೆಗೆ 267 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆಯ 80 ವರ್ಷದ ಮಹಿಳೆಯೊಬ್ಬರು ಮೇ.29 ರಂದು ಮೃತಪಟ್ಟಿದ್ದು, ಇವರ ಕೊರೋನ ವರದಿಯು ಪಾಸಿಟಿವ್ ಬಂದಿದೆ. 

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಕಲಬುರಗಿ 105, ಉಡುಪಿ 62, ರಾಯಚೂರು 35, ಬೆಂಗಳೂರು ನಗರ 20, ಮಂಡ್ಯ 13, ಯಾದಗಿರಿ 9, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ, ಶಿವಮೊಗ್ಗ, ಬಾಗಲಕೋಟೆ ಕೋಲಾರ ಮತ್ತು ಮೈಸೂರಿನಲ್ಲಿ ತಲಾ 2 ಹಾಗೂ ಹಾಸನ, ಬಳ್ಳಾರಿ, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 4,063 ಕೊರೋನ ಸೋಂಕಿತರ ಪೈಕಿ 1,514 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 111 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 53 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,494 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News