ಮದ್ಯ ಮಾರಾಟದ ಅವಧಿ ಹೆಚ್ಚಿಸಿದ ರಾಜ್ಯ ಸರಕಾರ

Update: 2020-06-03 16:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 3: ಮದ್ಯ ಮಾರಾಟದ ಅವಧಿಯನ್ನು ಇನ್ನೂ ಎರಡು ಗಂಟೆಗಳ ಕಾಲ ವಿಸ್ತರಿಸುವ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಅಬಕಾರಿ ಇಲಾಖೆ, ಬೆಳಗ್ಗೆ 9ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಮದ್ಯ ಖರೀದಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ಅವಧಿ ಹೆಚ್ಚಳದ ಜೊತೆಗೆ ಹೊಸದಾಗಿ ಬಿಯರ್ ಉತ್ಪಾದನೆಗೆ ಅನುಮತಿ ನೀಡಿದ್ದು, ಅದನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯದಂಗಡಿಗಳನ್ನು ಮೇ 4ರಂದು ಷರತ್ತು ವಿಧಿಸಿ ಬೆಳಗ್ಗೆ 9ರಿಂದ ಸಂಜೆ 7 ಗಂಟೆ ವರೆಗೆ ಮಾತ್ರ ಮದ್ಯದಂಗಡಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಿತ್ತು. ಇದೀಗ ಅವಧಿಯನ್ನು ಎರಡು ಗಂಟೆಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಒಬ್ಬ ವ್ಯಕ್ತಿ ಎರಡು ಲೀಟರ್ ವರೆಗೆ ಬಿಯರ್ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಈ ಮೇಲ್ಕಂಡ ಆದೇಶ ಜೂ.30ರ ವರೆಗೆ ಜಾರಿಯಲ್ಲಿರುತ್ತದೆ. ದಾಸ್ತಾನಿರುವ ಮದ್ಯವನ್ನು ಖಾಲಿ ಮಾಡಲು ಸೂಚನೆ ನೀಡಲಾಗಿದೆ.

ಕೊರೋನ ನಿಯಂತ್ರಣ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯನ್ವಯ ಎಲ್ಲರೂ ಮಾಸ್ಕ್ ಧರಿಸಿರಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮದ್ಯದಂಗಡಿಗಳಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ವಹಿವಾಟು ನಡೆಸುವ ವೇಳೆ ಸೋಂಕು ಹರಡದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News