ಏಕಲವ್ಯ ಪ್ರಶಸ್ತಿಗೆ ಅರ್ಹ ಕ್ರೀಡಾಪಟುಗಳ ಪಟ್ಟಿ ಸಿದ್ಧಪಡಿಸಿ: ಸಿ.ಟಿ.ರವಿ ಸೂಚನೆ

Update: 2020-06-03 16:54 GMT

ಬೆಂಗಳೂರು, ಜೂ.3: ಕಳೆದ ಮೂರು ವರ್ಷಗಳಿಂದ ಏಕಲವ್ಯ ಸೇರಿದಂತೆ ರಾಜ್ಯ ಸರಕಾರ ನೀಡುವ ಕ್ರೀಡಾ ಪ್ರಶಸ್ತಿಗಳನ್ನು ತಡೆಹಿಡಿದಿರುವುದು ಸರಿಯಲ್ಲ. ಕೂಡಲೇ ಕ್ರೀಡಾಂಗಣದಲ್ಲಿ ಗಣನೀಯ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಕೊಡಮಾಡಲು ಪಟ್ಟಿಯೊಂದನ್ನು ಸಿದ್ಧಪಡಿಸುವಂತೆ ಕ್ರೀಡಾ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಯವನಿಕ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕ್ರೀಡಾಪಟುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಪ್ರಭಾವ ಇಲ್ಲವೇ ಒತ್ತಡಗಳಿಗೆ ಮಣಿಯದೆ ಪ್ರಶಸ್ತಿ ಪಟ್ಟಿಯನ್ನು ಸಿದ್ಧಗೊಳಿಸಬೇಕೆಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡೆಗಳನ್ನು ಆಯೋಜಿಸುವ ಬಗ್ಗೆ ಗಮನ ವಹಿಸಬೇಕು. ರಾಜ್ಯದಲ್ಲಿರುವ ಕೀಡಾಪಟುಗಳ ಪ್ರತಿಭೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಹ ರೀತಿಯಲ್ಲಿ ಸೂಕ್ತ ವಾತಾವರಣ ಕಲ್ಪಿಸಬೇಕೆಂದು ಅವರು ಅವರು ತಿಳಿಸಿದ್ದಾರೆ.

ಕೋವಿಡ್-19 ಲಾಕ್‍ಡೌನ್‍ನಿಂದಾಗಿ ರಾಜ್ಯಾದ್ಯಂತ ಕ್ರೀಡಾ ತರಬೇತಿ ಕೇಂದ್ರಗಳು, ಕ್ರೀಡಾ ಶಾಲೆಗಳು, ಜಿಮ್‍ಗಳನ್ನು ಮುಚ್ಚಲಾಗಿದೆ. ಇವುಗಳನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದೇನೆ. ಸರಕಾರದಿಂದ ಅನುಮತಿ ಸಿಕ್ಕನಂತರ ಕ್ರೀಡಾಪಟುಗಳಿಗೆ ಕೋವಿಡ್-19ರ ಮಾರ್ಗಸೂಚಿಗಳ ಕುರಿತು ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅವರು ಹೇಳಿದರು.

ಕ್ರೀಡಾ ಶಾಲೆಗಳಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ಊಟ, ವಸತಿ ಕಲ್ಪಿಸಬೇಕು. ಕೆಲವು ಕಡೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇವುಗಳನ್ನು ಕೂಡಲೇ ಸರಿಪಡಿಸಬೇಕು. ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳು ಕೊರತೆಯಾಗದಂತೆ ಗಮನ ವಹಿಸಬೇಕು. ಇದರಲ್ಲಿ ಲೋಪವಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

-ಸಿ.ಟಿ.ರವಿ, ಕ್ರೀಡಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News