ಹೋಂ ಕ್ವಾರಂಟೈನ್‍ನಲ್ಲಿರುವವರ ವಿಳಾಸ ವೆಬ್‍ಸೈಟ್‍ನಲ್ಲಿ ಲಭ್ಯ

Update: 2020-06-03 16:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.3: ಹೊರ ರಾಜ್ಯಗಳಿಂದ ಬಂದು ಹೋಂ ಕ್ವಾರಂಟೈನ್‍ನಲ್ಲಿರುವವರ ಮನೆ ವಿಳಾಸವೀಗ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.

covid19.karnataka.gov.in ವೆಬ್‍ಸೈಟ್‍ನಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳ ಜೊತೆಗೆ ಮನೆ ವಿಳಾಸವನ್ನು ಹಾಕಲಾಗುತ್ತಿದೆ.

ಈಗಾಗಲೇ ರಾಜ್ಯ ಕೋವಿಡ್-19 ವಾರ್ ರೂಮ್ ಉಸ್ತುವಾರಿ ಮುನಿಷ್ ಮೌದ್ಗಿಲ್ ಅವರು ಹೊರ ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯೂ 14 ದಿನಗಳ ಹೋಂ ಕ್ವಾರಂಟೈನ್‍ಗೆ ಒಳಗಾಗಲೇಬೇಕು, ಮಹಾರಾಷ್ಟ್ರದಿಂದ ಬಂದವರು 7 ದಿನಗಳ ಹೆಚ್ಚುವರಿ ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಹೊರರಾಜ್ಯದಿಂದ ಬರುತ್ತಿರುವವರಲ್ಲಿ ಕೊರೋನ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಅವರು ಕ್ವಾರಂಟೈನ್‍ನಿಂದ ತಪ್ಪಿಸಿಕೊಳ್ಳುತ್ತಿರುವುದು ವರದಿಯಾಗಿರುವ ಹಿನ್ನೆಲೆ ಸರಕಾರ ಈ ಕ್ರಮ ಕೈಗೊಂಡಿದೆ.

ಯಾರಾದರೂ ಕ್ವಾರಂಟೈನ್‍ಗೆ ಒಳಗಾದಾಗ ಅದನ್ನು ನೆರೆಹೊರೆಯವರಲ್ಲಿ ಮುಚ್ಚಿಡುವ ಅಗತ್ಯತೆ ಏನಿದೆ ಎಂದು ಬೆಳ್ಳಂದೂರು ನಿವಾಸಿ ಜಯಕುಮಾರ್ ಹೇಳಿದ್ದರೆ, ಹೋಂ ಕ್ವಾರಂಟೈನ್‍ಗೆ ಒಳಗಾಗುವವರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಾದರು ಏನಿರುತ್ತದೆ? ಎಂದು ಸಿಟಿಜನ್ ಆಫ್ ಬೆಂಗಳೂರು ಸದಸ್ಯರಾದ ತಾರಾ ಕೃಷ್ಣಸ್ವಾಮಿ ಪ್ರಶ್ನಿಸಿದ್ದಾರೆ.

ಕೊರೋನ ಸೋಂಕಿನ ವಿಚಾರದಲ್ಲಿ ನಾವು ಸಾರ್ವಜನಿಕ ಆರೋಗ್ಯ ವಿಚಾರವೆಂದು ಪರಿಗಣಿಸುವಂತಿಲ್ಲ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಹೊರಗಿನ ದೇಶದಿಂದ ಪ್ರಯಾಣಿಸಿದವರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಎಲ್ಲಿಂದ ಬರುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಅವರ ಕುಟುಂಬ ಸದಸ್ಯರು ಇದ್ದಾರೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಹಾಕಲಾಗಿದೆ ಎಂದು ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News