​ಜಂಬೂರಿನಲ್ಲಿ ಜೆಡಿಎಸ್ ಪ್ರತಿಭಟನೆ : ಪ್ರಮುಖರು ಪೊಲೀಸ್ ವಶ

Update: 2020-06-04 10:35 GMT

ಮಡಿಕೇರಿ ಜೂ. 4 : ಮಳೆಹಾನಿ ಸಂತ್ರಸ್ತರ ನೂತನ ಮನೆಗಳ ಹಸ್ತಾಂತರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾದಳದ ಪ್ರಮುಖರು ಹಾಗೂ ಕಾರ್ಯಕರ್ತರು ಜಂಬೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ವಸತಿ ಸಚಿವ ವಿ.ಸೋಮಣ್ಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರ ಉಪಸ್ಥಿತಿಯಲ್ಲಿ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮತ್ತು ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕುಮಾರಸ್ವಾಮಿ ಅವರ ಕಡೆಗಣನೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗಣೇಶ್ ಸೇರಿದಂತೆ 70 ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. 2018 ರಲ್ಲಿ ಅತಿವೃಷ್ಟಿ ಹಾನಿಯಿಂದ ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಾಗ ಸಕಾಲದಲ್ಲಿ ನೆರವಿಗೆ ಬಂದವರು ಕುಮಾರಸ್ವಾಮಿ ಅವರು. ಆದರೆ ಇಂದು ವಸತಿ ಯೋಜನೆ ಪೂರ್ಣಗೊಂಡು ಹಸ್ತಾಂತರಿಸುವ ಸಂದರ್ಭ ಮಾಜಿ ಮುಖ್ಯಮಂತ್ರಿಗಳನ್ನೇ ಆಹ್ವಾನಿಸದೆ ಅವಮಾನಿಸಲಾಗಿದೆ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತ ನಡೆಸುತ್ತಿರುವವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಉಪಾಧ್ಯಕ್ಷ ಮನ್ಸೂರ್ ಆಲಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಎನ್.ಸಿ.ಸುನಿಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಬೆಟ್ಟಗೇರಿ, ಗಣೇಶ್, ಮಡಿಕೇರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾದ್ ಶಾ, ಮಡಿಕೇರಿ ನಗರ ಎಸ್.ಸಿ. ಘಟಕದ ಅಧ್ಯಕ್ಷ ಹೆಚ್.ಎ.ರವಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News