ದ್ವಿತೀಯ ಪಿಯುಸಿ ಮೌಲ್ಯಮಾಪನದಿಂದ ಹಿಂದೆ ಸರಿದ ಉಪನ್ಯಾಸಕರು

Update: 2020-06-04 12:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.4: ಮೌಲ್ಯಮಾಪನ ಕೇಂದ್ರವನ್ನು ವಿಕೇಂದ್ರೀಕರಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ದ್ವಿತೀಯ ಪಿಯುಸಿ ಉಪನ್ಯಾಸಕರು, ವಿಜ್ಞಾನ ಪ್ರಶ್ನೆಪತ್ರಿಕೆ ಮೌಲ್ಯಮಾಪನದಿಂದ ಹಿಂದೆ ಸರಿದಿದ್ದಾರೆ.

ನಗರದ ಎಂಟು ಕೇಂದ್ರಗಳು ಸೇರಿದಂತೆ ರಾಜ್ಯದ ವಿವಿಧೆಡೆ ಬುಧವಾರ ಏಕಕಾಲದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಬೇಕಿತ್ತು. ಆದರೆ, ಸರಕಾರ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ನಡೆಸುವ ಉಪನ್ಯಾಸಕರು ಮುಂದಿಟ್ಟಿದ್ದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದ ಹಿನ್ನೆಲೆ ಕೆಲವೇ ಕೆಲವು ಮಂದಿ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು.

ಉಪನ್ಯಾಸಕರಿಗೆ ಸರಕಾರ ಆರೋಗ್ಯ ಭದ್ರತೆ ನೀಡಿಲ್ಲ. ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೂ ನಮ್ಮ ವೆಚ್ಚದಲ್ಲೇ ಮಾಸ್ಕ್ ಮತ್ತು ಸ್ಯಾನಿಟೈಸರ್ ಖರೀದಿಸಬೇಕೆಂದು ಹೇಳಿದೆ. ಆರೋಗ್ಯ ಭದ್ರತೆ ಇಲ್ಲದಿದ್ದರೆ ನಾವು ಹೇಗೆ ಮೌಲ್ಯಮಾಪನ ನಡೆಸಬೇಕೆಂದು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಪ್ರಶ್ನಿಸಿದ್ದಾರೆ.

ಮೌಲ್ಯಮಾಪನ ಕೇಂದ್ರಗಳನ್ನು ವಿಕೇಂದ್ರೀಕರಣಗೊಳಿಸಬೇಕು. ಅಲ್ಲದೆ ಮೌಲ್ಯಮಾಪನ ನಡೆಸುವವರಿಗೆ ಆರೋಗ್ಯ ಭದ್ರತೆ, ಹೆಚ್ಚಿನ ವೇತನ, ಸರಕಾರಿ ವೆಚ್ಚದಲ್ಲಿ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಬಳಕೆ, ಉಳಿಯಲು ಪ್ರತ್ಯೇಕ ಕೊಠಡಿ, ಊಟ, ವಸತಿ ವ್ಯವಸ್ಥೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ಉಪನ್ಯಾಸಕರ ಸಂಘ ಕಳೆದ ಹಲವು ದಿನಗಳಿಂದ ಒತ್ತಡ ಹಾಕಿತ್ತು. ಆದರೆ, ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ನಿಂಗೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News