ಪೊಲೀಸರು ಸೇರಿ ಕೊರೋನ ಸೋಂಕಿತರು ಅಸ್ಪಶ್ಯರಲ್ಲ: ಉಡುಪಿ ಜಿಲ್ಲಾಧಿಕಾರಿ

Update: 2020-06-04 16:55 GMT

ಉಡುಪಿ, ಜೂ.4: ಜಿಲ್ಲೆಯ ಒಟ್ಟು 9 ಮಂದಿ ಪೊಲೀಸರು ಕೊರೋನ ವೈರಸ್ ಪಾಸಿಟಿವ್ ಬಂದಿರುವುದು ಆತಂಕದ ವಿಷಯವಾಗಿದ್ದರೂ, ಇದೀಗ 9 ಮಂದಿಯೂ ನೆಗೆಟಿವ್ ಬಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದು ಎಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಪೊಲೀಸರು ಯಾವತ್ತೂ ಮುಂಚೂಣಿಯಲ್ಲಿದ್ದು ಹೋರಾಡುವವರು. ಇವರಿಗೆ ಇಂಥ ಆತಂಕ ಸಾಮಾನ್ಯ. ಆದರೆ ಇದಕ್ಕಾಗಿ ಯಾರೂ ಚಿಂತಿಸಬೇಕಾಗಿಲ್ಲ. ಶೇ.98 ಜನರು ಚಿಕಿತ್ಸೆ ಇಲ್ಲದೇ ಗುಣಮುಖರಾಗುತ್ತಿರುವುದನ್ನು ನಾವು ಕಂಡಿದ್ದೇವೆ. ಹೀಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುವ ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆಯೂ ಅವರು ಇದೇ ರೀತಿ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಆದರೆ ಜನರು ಕೆಲವು ಪೊಲೀಸರಿಗೆ ಪಾಸಿಟಿವ್ ಬಂದ ತಕ್ಷಣ ಅವರನ್ನು ಅಸ್ಪಶ್ಯತೆಯಿಂದ ನೋಡಬಾರದು. ಅದು ಪೊಲೀಸರೇ ಆಗಿರಲಿ, ಆರೋಗ್ಯ ಇಲಾಖೆಯವರೇ ಆಗಿರಲಿ ಯಾರನ್ನೂ ಅಸ್ಪಶ್ಯರ ರೀತಿ ನೋಡಬೇಡಿ ಎಂದು ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದರು.

ಅವರು ನಮ್ಮ ಯೋಧರು. ನಮಗಾಗಿ, ನಮ್ಮ ಪ್ರಾಣರಕ್ಷಣೆಗೆ ಹೋರಾಟ ನಡೆಸುವವರು. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಜಗದೀಶ್ ನುಡಿದರು.

ಜಿಲ್ಲೆಯಲ್ಲಿ ಇದುವರೆಗೆ 68 ಕಂಟೇನ್‌ಮೆಂಟ್ ಝೋನ್‌ಗಳನ್ನು ಮಾಡಿದ್ದೇವೆ. ಈ ವಲಯಗಳ ವ್ಯಾಪ್ತಿ ಸರಕಾರದ ಇತ್ತೀಚಿನ ಸುತ್ತೋಲೆ ಪ್ರಕಾರ ತುಂಬಾ ಕಡಿಮೆಯಾಗಿದೆ. ಮೊದಲು 5ಕಿ.ಮೀ. ಇದ್ದು, ಮುಂದೆ ಅದು ಒಂದು ಕಿ.ಮೀ.ಗೆ ಇಳಿಯಿತು. ಈಗ ಸೋಂಕಿತರ ಮನೆ ಇರುವ ಪ್ರದೇಶ, ಬೀದಿ ಮಾತ್ರ ಈ ವ್ಯಾಪ್ತಿಗೆ ಬರುತ್ತದೆ ಎಂದರು.

ಸೋಂಕಿತರಿರುವ ಒಂದು ಮನೆಯನ್ನು, ಪ್ರದೇಶವನ್ನು ಸೀಲ್‌ಡೌನ್ ಮಾಡಿದ ಬಳಿಕ ಯಾರೂ ಅಲ್ಲಿಗೆ ಹೋಗಬಾರದು. ಹಾಗೂ ಯಾರೂ ಅಲ್ಲಿಂದ ಹೊರಬಂದು ಸೋಂಕನ್ನು ಹರಡಬಾರದು ಎಂದು ಡಿಸಿ, ಸಾರ್ವಜನಿಕರು ಆ ಪ್ರದೇಶಕ್ಕೆ ಕಾಲಿಡಬಾರದು. ಮನೆಯವರಿಗೆ ಅಗತ್ಯ ವಸ್ತುಗಳು ಬೇಕಿದ್ದರೆ ಅಲ್ಲಿನ ತಹಶೀಲ್ದಾರ್ ಸೇರಿದಂತೆ ಕಾರ್ಯಕರ್ತರಿಗೆ ತಿಳಿಸಿದರೆ ನೇರವಾಗಿ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

ಕ್ವಾರಂಟೈನ್ ಅವಧಿಯನ್ನು ಈಗ 7ದಿನಕ್ಕೆ ಇಳಿಸಲಾಗಿದೆ. ಅವರು ಮತ್ತೆ ಏಳು ದಿನ ಮನೆ ಕ್ವಾರಂಟೈನ್‌ನಲ್ಲಿರಬೇಕು. ಒಟ್ಟು 14 ದಿನಗಳಾದ ಬಳಿಕ ಇನ್ನೂ 14 ದಿನಗಳನ್ನು ಅವರು ಸ್ವಯಂ ವರದಿ ಅವಧಿಯಾಗಿ ಕಳೆಯಬೇಕು. ಈ 28 ದಿನಗಳ ಅವಧಿಯಲ್ಲಿ ಯಾವಾಗಲೂ ರೋಗದ ಲಕ್ಷಣ ಕಂಡುಬಂದರೆ ತಕ್ಷಣ ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರನ್ನು ಕೂಡಲೇ ಪರೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News