ಅಯೋಧ್ಯೆಯನ್ನು ಬೌದ್ಧ ಸ್ಮಾರಕವೆಂದು ಘೋಷಿಸುವಂತೆ ಕರ್ನಾಟಕ ಬೌದ್ಧ ಸಮಾಜದಿಂದ ರಾಷ್ಟ್ರಪತಿಗೆ ಮನವಿ

Update: 2020-06-04 18:07 GMT

ಬೆಂಗಳೂರು, ಜೂ.4: ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಉತ್ಖನನದ ಸಂದರ್ಭದಲ್ಲಿ ಬೌದ್ಧಾವಶೇಷಗಳು ದೊರೆತಿರುವ ಹಿನ್ನೆಲೆಯಲ್ಲಿ ಆ ಜಾಗವನ್ನು ಪ್ರಾಚೀನ ಪುರಾತತ್ವ ಬೌದ್ಧ ಸ್ಮಾರಕವೆಂದು ಘೋಷಿಸಿ, ಆ ಸ್ಥಳವನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಬೌದ್ಧ ಸಮಾಜವು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿದೆ.

ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಂ.ಮರಿಸ್ವಾಮಿ, ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಒಳಗೊಂಡ ಕರ್ನಾಟಕ ಬೌದ್ಧ ಸಮಾಜದ ಮುಖಂಡರು, ಭಾರತ ಸರಕಾರ ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ನೆಲೆಗಳು ಹಾಗೂ ಪಳೆಯುಳಿಕೆ ಕಾಯ್ದೆ-1958ರ ಪ್ರಕಾರ ಆಯೋಧ್ಯೆಯ ನೆಲವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಬೇಕೆಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‍ನ ತೀರ್ಪಿನಂತೆ ವಿವಾದಿತ ಆಯೋಧ್ಯೆ ನೆಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ಸ್ಥಳದ ಉತ್ಖನನದ ಸಂದರ್ಭದಲ್ಲಿ ಬೌದ್ಧಾವಶೇಷಗಳು ಮತ್ತು ಬೌದ್ಧ ಕಲಾಕೃತಿಗಳು ದೊರೆತಿವೆ. ಇದಕ್ಕೆ ಪೂರಕವಾಗಿ ಪುರಾತತ್ವ ಇಲಾಖೆಯ ಮೊಟ್ಟ ಮೊದಲ ಸಮೀಕ್ಷೆಯಲ್ಲಿ(1862-63) ಅಯೋಧ್ಯೆ ಬೌದ್ಧರ ನೆಲೆಯಾಗಿತ್ತೆಂದು ವರದಿಯಾಗಿದೆ.

ಬೌದ್ಧರ ಕಾಲದಲ್ಲಿ ಅಯೋಧ್ಯೆಯನ್ನು ಸಾಕೇತ ಎಂದು ಕರೆಯಲಾಗುತ್ತಿತ್ತು. ಮತ್ತು ಸಾಕೇತವು ಪ್ರಮುಖ ಬೌದ್ಧ ಕೇಂದ್ರವಾಗಿತ್ತು. ಅನೇಕ ಇತಿಹಾಸ ತಜ್ಞರು ಮತ್ತು ವಿದ್ವಾಂಸರು, ಬುದ್ಧನು ತನ್ನ ಜೀವಿತ ಕಾಲದ ಅನೇಕ ವರ್ಷಗಳನ್ನು ಈ ಸಾಕೇತದಲ್ಲಿ ಕಳೆದಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.

ಕೆಲವು ಮಾಧ್ಯಮಗಳು ಉತ್ಖನನದ ವೇಳೆ ದೊರೆತಿರುವ ಬೌದ್ಧ ವಿಗ್ರಹಗಳನ್ನು ಶಿವಲಿಂಗವೆಂದು ಬಿಂಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಇವೆಲ್ಲವುಗಳನ್ನು ಗಂಭೀರವಾಗಿ ಪರಿಗಣಿಸಿ ಆಯೋಧ್ಯೆಯ ನೆಲವನ್ನು ಪ್ರಾಚೀನ ಬೌದ್ಧ ಸ್ಮಾರಕವೆಂದು ಘೋಷಿಸಲು ಕರ್ನಾಟಕ ಬೌದ್ಧ ಸಮಾಜವು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News