ಏಕರೂಪಿ ಪಠ್ಯಕ್ರಮ ಸರಿಯಲ್ಲ

Update: 2020-06-06 05:24 GMT

ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದ ಕುರಿತಂತೆ ರಾಜ್ಯದ ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಹೊರಡಿಸಿರುವ ಆದೇಶವೊಂದು ವಿವಾದಕ್ಕೆ ಕಾರಣವಾಗಿದೆ. ಈ ಆದೇಶದ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ರಾಜ್ಯದಾದ್ಯಂತ ಏಕರೂಪಿ ಪಠ್ಯಕ್ರಮವನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಲಾಗಿದೆಯಂತೆ. ಇದರಿಂದ ಬಹುಮುಖಿ ಸಂಸ್ಕೃತಿಯಲ್ಲಿ ನಂಬಿಕೆ ಹೊಂದಿರುವ ನಾಡಿನ ವಿದ್ವತ್ ವಲಯ ಸಹಜವಾಗಿ ಆತಂಕಕ್ಕೆ ಒಳಗಾಗಿದೆ. ಇಂತಹ ಆತುರದ ಕ್ರಮದಿಂದ ಪ್ರಾದೇಶಿಕ ವೈಶಿಷ್ಟಗಳು ಮಾಯವಾಗಿ ಮೇಲ್ವರ್ಗಗಳ ,ಮೇಲ್ಜಾತಿಗಳ ಹಿತಾಸಕ್ತಿಗಳನ್ನು ಕಾಪಾಡುವಂತಹ ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂಬ ಚಿಂತಕರ ಕಳವಳವನ್ನು ತಳ್ಳಿ ಹಾಕುವಂತಿಲ್ಲ.

ಸದ್ಯ ಪ್ರತಿಯೊಂದು ವಿಶ್ವವಿದ್ಯಾನಿಲಯವೂ ತನ್ನದೇ ಆದ ವಿಭಿನ್ನವಾದ ಪಠ್ಯಕ್ರಮ ಮತ್ತು ಅಕಾಡಮಿಕ್ ಕ್ಯಾಲೆಂಡರ್ ಇಟ್ಟುಕೊಂಡಿದೆ. ಹೀಗಾಗಿ ಪರಸ್ಪರ ತಾಳಮೇಳವಿಲ್ಲದಂತಾಗಿದೆ. ಆದ್ದರಿಂದ ಈ ಗೊಂದಲವನ್ನು ನಿವಾರಿಸಲು ಹಾಗೂ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಏಕರೂಪದ ಪಠ್ಯಕ್ರಮ ಅನಿವಾಯ    ವಾರ್ಗಿದೆ ಎಂಬ ಅಭಿಪ್ರಾಯವನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಜೊತೆಗೆ ಭಿನ್ನ ಪಠ್ಯಕ್ರಮಗಳಿಂದಾಗಿ ವಿಪರೀತ ಖರ್ಚು, ವೆಚ್ಚವಾಗುತ್ತಿದೆ. ಇದರಿಂದ ಸರಕಾರದ ಮೇಲೆ ಹಣಕಾಸಿನ ಹೊರೆ ಹೆಚ್ಚಾಗುತ್ತದೆ ಎಂಬ ವಾದವೂ ಇಂತಹ ಆದೇಶದ ಹಿಂದಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಇದು ಸರಿಯಲ್ಲ. ಬಹುಸಂಸ್ಕೃತಿ ಮತ್ತು ವಿಶಾಲ ಭೂ ಪ್ರದೇಶ ಹಾಗೂ ಅಪಾರ ಮಾನವ ಸಂಪನ್ಮೂಲಗಳನ್ನು ಹೊಂದಿರುವ ಭಿನ್ನ ಕಲಿಕಾ ಸಾಮರ್ಥ್ಯವುಳ್ಳ ನಾಡಿಗೆ ಈ ಏಕರೂಪಿ ಪಠ್ಯಕ್ರಮ ಅಪಾಯಕಾರಿಯಾಗಿದೆ.

ಏಕೀಕರಣಕ್ಕೆ ಮುನ್ನ ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ನಾಡು ಇಂದಿಗೂ ವೈವಿಧ್ಯತೆಯ ಬೀಡು. ಇಲ್ಲಿ ಕನ್ನಡದ ಜೊತೆ ಕೊಂಕಣಿ, ತುಳು, ಬ್ಯಾರಿ, ಕೊಡವ ಸೇರಿದಂತೆ ಹಲವಾರು ಸಹ ಭಾಷೆಗಳಿವೆ. ಹಳೆಯ ಮೈಸೂರು, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಹೀಗೆ ಭಿನ್ನ ಸಂಸ್ಕೃತಿ, ಜೀವನ ಕ್ರಮಗಳನ್ನು ಹೊಂದಿರುವ ಪ್ರದೇಶಗಳು ಭಾಷೆಯ ಆಧಾರದಲ್ಲಿ ಏಕೀಕೃತ ಕರ್ನಾಟಕದಲ್ಲಿ ಒಳಗೊಂಡಿವೆ. ಅಂತಲೇ ಕರ್ನಾಟಕ ರಾಜ್ಯ ನಿರ್ಮಾಣವಾದಾಗಿನಿಂದ ಸಾಂಸ್ಕೃತಿಕ, ಭೌಗೋಳಿಕ, ಭಾಷಿಕ, ಪಾರಿಸಾರಿಕ, ವ್ಯಾವಹಾರಿಕ ವೈಶಿಷ್ಟಗಳನ್ನು ಕಾಪಾಡಿಕೊಳ್ಳುತ್ತ ಬಂದಿದ್ದೇವೆ. ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಸಹ ಭಾಷೆಗಳ ವೈಶಿಷ್ಟಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತ ಬಂದಿದ್ದೇವೆ. ಅಂತಲೇ ಬಹುಮುಖಿ ವಿಕಾಸಕ್ಕೆ ಪೂರಕವಾದ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸಂವಿಧಾನ ನಮಗೆ ಮಾರ್ಗದರ್ಶಿಯಾಗಿದೆ. ಸ್ವಾತಂತ್ರಾ ನಂತರದ ಏಳು ದಶಕಗಳ ಕಾಲ ನಮ್ಮ ಬಹುಮುಖಿ ಭಾರತ ಹೀಗೆ ಬಲಗೊಳ್ಳುತ್ತಾ ಬಂದಿದೆ. ಆದರೆ ಬಹುತ್ವದಲ್ಲಿ ನಂಬಿಕೆಯಿಲ್ಲದ ಸಿದ್ಧಾಂತವನ್ನು ಹೊಂದಿದ ಪಕ್ಷ ಅಧಿಕಾರ ಸೂತ್ರ ಹಿಡಿದ ನಂತರ ನಮ್ಮ ದೇಶದ ಜೀವಾಳವಾದ ಅನೇಕತೆಯನ್ನು ನಾಶಮಾಡಿ ಏಕ ಸಂಸ್ಕೃತಿ, ಏಕ ಧರ್ಮವನ್ನು ಹೇರುವ ಮಸಲತ್ತು ನಡೆದಿದೆ. ಈಗ ತರಲು ಹೊರಟ ಏಕರೂಪಿ ಪಠ್ಯಕ್ರಮವೂ ಈ ಕಾರ್ಯಸೂಚಿಯ ಭಾಗವಾಗಿದೆ.

ಈವರೆಗೆ ನಾವು ಪ್ರತಿ ವಿಶ್ವವಿದ್ಯಾನಿಲಯವನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸುತ್ತಾ ಬಂದಿದ್ದೇವೆ. ಅದಕ್ಕೆ ಪೂರಕವಾಗಿ ಪ್ರತಿ ವಿಶ್ವವಿದ್ಯಾನಿಲಯವು ತನ್ನದೇ ಆದ ಪ್ರಾದೇಶಿಕ, ಭೌಗೋಳಿಕ ವೈಶಿಷ್ಟವನ್ನು ಹೊಂದಿದೆ. ಆಯಾ ಭಾಗದ ವಿದ್ಯಾರ್ಥಿಗಳ ಧಾರಣಾ ಶಕ್ತಿ ಇತ್ಯಾದಿಗಳನ್ನು ಪರಿಗಣಿಸಿ ತನ್ನದೇ ಆದ ಪಠ್ಯಕ್ರಮ, ಪಠ್ಯಪುಸ್ತಕಗಳನ್ನು ರೂಪಿಸಿಕೊಳ್ಳಲಾಗಿದೆ. ಇದರಲ್ಲಿ ಲೋಪಗಳಿರಲಿಲ್ಲವೆಂದಲ್ಲ, ಆದರೆ ಇದನ್ನೇ ನೆಪ ಮಾಡಿಕೊಂಡು ಈಗ ಏಕರೂಪಿ ಪಠ್ಯಕ್ರಮವನ್ನು ತರಲು ಹೊರಟಿರುವುದು ತಾರ್ಕಿಕವಲ್ಲದ ಅವೈಜ್ಞಾನಿಕ ಕ್ರಮವಾಗಿದೆ. ಈ ಬಗ್ಗೆ ನಾಡಿನ ಚಿಂತಕರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಭಾಷಾ ವಿದ್ವಾಂಸರು, ಸಮಾಜ ವಿಜ್ಞಾನಿಗಳು, ಅರ್ಥಶಾಸ್ತ್ರ ಪಂಡಿತರು ಹೀಗೆ ಎಲ್ಲರೊಂದಿಗೆ ಸಮಾಲೋಚನೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುವುದು ಸೂಕ್ತ.

ಈಗಿರುವ ಪಠ್ಯಕ್ರಮ ಕೂಡ ದೋಷಾತೀತವಾಗಿಲ್ಲ. ಪರಿಸರ ವಿಜ್ಞಾನದ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಕುರಿತು ಅಧ್ಯಯನಕ್ಕೆ ಅವಕಾಶ ದೊರೆತಂತೆ ಉತ್ತರ ಕರ್ನಾಟಕದ ಒಣ ಬೇಸಾಯದ ಭೂ ಲಕ್ಷಣ, ಅಲ್ಲಿನ ಬೆಳೆಗಳು, ಅವುಗಳ ಪೌಷ್ಟಿಕತೆ, ಇತ್ಯಾದಿಗಳ ಬಗ್ಗೆ ಸರಿಯಾದ ಅಧ್ಯಯನ ನಡೆದಿಲ್ಲ. ನಾಡಿನ ಭಾಷಾ ವೈವಿಧ್ಯತೆ, ಸಾಂಸ್ಕೃತಿಕ ವೈಶಿಷ್ಟತೆಗಳು, ವಿಭಿನ್ನ ಸಾಮಾಜಿಕ ಸ್ವರೂಪಗಳ ಬಗ್ಗೆ ಅಧ್ಯಯನ ನಡೆದಿಲ್ಲ. ಇದಕ್ಕೆಲ್ಲ ಪಠ್ಯದ ಕೇಂದ್ರೀಕರಣ ಕಾರಣವಲ್ಲದೇ ಬೇರೇನೂ ಅಲ್ಲ. ಹೀಗಿರುವಾಗ ಏಕರೂಪದ ಪಠ್ಯಕ್ರಮ ರೂಪಿಸುವ ಕ್ರಮ ಪ್ರಾದೇಶಿಕ ಅಸ್ಮಿತೆಗೆ, ವೈವಿಧ್ಯತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಆದ್ದರಿಂದ ಸರಕಾರ ದುಡುಕಿನ ಕ್ರಮ ಕೈಗೊಳ್ಳಬಾರದು. ಈ ಆದೇಶದ ಬಗ್ಗೆ ಮರು ಪರಿಶೀಲನೆ ಮಾಡಿ ಶಿಕ್ಷಣ ಪರಿಣತರು, ಸಾಮಾಜಿಕ ವಿಜ್ಞಾನಿಗಳು, ಅಧ್ಯಾಪಕರು ಮತ್ತು ಇತರ ತಜ್ಞರ ಜೊತೆ ಸಮಾಲೋಚನೆ ಮಾಡಿ ರಾಜ್ಯದ ಎಲ್ಲ ಭಾಗಗಳಲ್ಲೂ ಈ ಬಗ್ಗೆ ಸಂವಾದಗಳನ್ನು ನಡೆಸಿ ಒಂದು ಸಮರ್ಪಕವಾದ ಹೆಜ್ಜೆ ಇಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News