ರಾಜ್ಯಸಭೆ ಚುನಾವಣೆಗೆ ಮುನ್ನ 65 ಶಾಸಕರನ್ನು ರೆಸಾರ್ಟ್ ಗಳಿಗೆ ಸ್ಥಳಾಂತರಿಸಿದ ಕಾಂಗ್ರೆಸ್

Update: 2020-06-07 17:26 GMT

ಅಹ್ಮದಾಬಾದ್, ಜೂ.7: ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲೇ 3 ಶಾಸಕರ ರಾಜೀನಾಮೆಯ ಬಳಿಕ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ಶಾಸಕರಿಗೆ ಆಮಿಷವೊಡ್ಡಿ ಸೆಳೆಯುವುದನ್ನು ತಪ್ಪಿಸುವ ಉದ್ದೇಶದಿಂದ ಹಲವು ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೂನ್ 3ರಂದು ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜೀತು ಚೌಧುರಿ, ಜೂನ್ 5ರಂದು ಬೃಜೇಶ್ ಮಿಶ್ರಾ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಬಲ 65ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಆನಂದ್, ಅಂಬಾಜಿ ಮತ್ತು ರಾಜ್‌ಕೋಟ್‌ನಲ್ಲಿರುವ ರೆಸಾರ್ಟ್‌ಗೆ ತೆರಳುವಂತೆ ಶಾಸಕರಿಗೆ ಶನಿವಾರ ಪಕ್ಷದ ಹೈಕಮಾಂಡ್ ಸೂಚಿಸಿದೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗೆ ಶಾಸಕರು ತೆರಳಲಿದ್ದಾರೆ. ಹಲವರು ಈಗಾಗಲೇ ರೆಸಾರ್ಟ್‌ಗೆ ಆಗಮಿಸಿದ್ದು ಉಳಿದವರೂ ಶೀಘ್ರವೇ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ಹೇಳಿದ್ದಾರೆ.

ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯವರೆಗೂ ಈ ಶಾಸಕರು ರೆಸಾರ್ಟ್‌ನಲ್ಲೇ ಉಳಿದುಕೊಳ್ಳಲಿದ್ದಾರೆ. ಪಕ್ಷದ ಹಿರಿಯ ನಾಯಕರು ಶಾಸಕರನ್ನು ಸಂಪರ್ಕಿಸಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದವರು ಹೇಳಿದ್ದಾರೆ.

ಈ ಹಿಂದೆ ರಾಜ್ಯಸಭಾ ಚುನಾವಣೆ ಮಾರ್ಚ್ 26ಕ್ಕೆ ನಿಗದಿಯಾಗಿದ್ದ ಸಂದರ್ಭವೂ ಕಾಂಗ್ರೆಸ್ ತನ್ನ ಶಾಸಕರನ್ನು ಜೈಪುರದ ರೆಸಾರ್ಟ್‌ಗೆ ಸ್ಥಳಾಂತರಿಸಿತ್ತು. ಆದರೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆ ಜೂನ್ 19ಕ್ಕೆ ಮುಂದೂಡಿಕೆಯಾಗಿದೆ. ರಾಜ್ಯದಿಂದ ಹಿರಿಯ ನಾಯಕರಾದ ಭರತಸಿನ್ಹ ಸೋಲಂಕಿ ಹಾಗೂ ಶಕ್ತಿಸಿನ್ಹ ಗೋಯಲ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ ವಿಧಾನಸಭೆಯಲ್ಲಿ ಪಕ್ಷದ ಬಲ ಕುಸಿದಿರುವುದರಿಂದ ಎರಡೂ ಸೀಟುಗಳಲ್ಲಿ ಗೆಲ್ಲುವ ಸಾಧ್ಯತೆ ಕ್ಷೀಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News